ಮರಳು ದಂಧೆ ತಡೆಯದಿದ್ದರೆ ಸಂಚಾರ ತಡೆ ಹೋರಾಟ

ದೇವದುರ್ಗ.ನ.೦೮- ತಾಲೂಕಿನ ಕೃಷ್ಣಾ ನದಿಯಲ್ಲಿ ಮರಳು ಅಕ್ರಮ ದಂಧೆ ಮಿತಿಮೀರಿದ್ದು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಶಾಮೀಲಾಗಿದ್ದಾರೆ. ದಂಧೆ ತಡೆಯುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಕೈಚಲ್ಲಿ ಕುಳಿತಿದ್ದಾರೆ. ಗಣಿಗಾರಿಕೆ ತಡೆಯಲು ಒಂದು ವಾರ ಗಡುವು ನೀಡಲಾಗುವುದು. ನಿಲ್ಲಿಸದಿದ್ದರೆ ಮರಳು ದಂಧೆ ನಡೆಯುವ ರಸ್ತೆ ಮೇಲೆ ಸಂಚಾರ ತಡೆ ನಡೆಸಲಾಗುವುದು ಎಂದು ಕರವೇ (ಪ್ರವೀಶಶೆಟ್ಟಿ ಬಣ) ಜಿಲ್ಲಾ ಉಪಾಧ್ಯಕ್ಷ ಎಂ.ಎಸ್.ವೆಂಕಟೇಶ ಎಚ್ಚರಿಸಿದರು.
ಕೃಷ್ಣಾ ನದಿಯಿಂದ ಮರಳು ಸಾಗಣೆ ಮಾಡಲು ಕಂಪನಿಗಳಿಗೆ ನೀಡಿದ ಗುತ್ತಿಗೆ ಅವಧಿ ಮುಗಿದ ವರ್ಷ ಉರುಳಿದರೂ ರಿನಿವಲ್ ಮಾಡಿಲ್ಲ. ಗಮನ ಹರಿಸಬೇಕಾದ ಅಧಿಕಾರಿಗಳು ಕಣ್ಣುಚ್ಚಿ ಕುಳಿತಿದ್ದಾರೆ. ಇದರಿಂದ ನದಿಯಿಂದ ಹಗಲು ರಾತ್ರಿ ರಾಜಾರೋಷವಾಗಿ ಮರಳು ಗಣಿಗಾರಿಕೆ ನಡೆಯುತ್ತಿದೆ ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಆರೋಪಿಸಿದರು.
ಬಹುತೇಕ ಟಿಪ್ಪರ್‌ಗಳು ಮನಸೋ ಇಚ್ಚೆ ಮರಳು ಸಾಗಣೆ ಮಾಡುತ್ತಿವೆ. ೧೦ರಿಂದ ೧೪ ಮೆಟ್ರಿಕ್ ಟನ್ ರಾಯಲ್ಟಿ ಪಡೆದು, ಓವರ್‌ಲೋಡ್‌ಆಗಿ ೫೦-೬೦ ಮೆಟ್ರಿಕ್ ಟನ್ ಮರಳು ಅಕ್ರಮವಾಗಿ ಸಾಗಿಸುತ್ತಿದ್ದಾರೆ. ಪ್ರಕೃತಿ ಸಂಪನ್ಮೂಲ ಹಾಳಾಗುವ ಜತೆಗೆ ಸರ್ಕಾರಕ್ಕೆ ಬರಬೇಕಿದ್ದ ರಾಜಧನ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಪಾಲಾಗುತ್ತಿದೆ. ಇದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ರಾಜಧನ ನಷ್ಟವಾಗುತ್ತಿದೆ ಎಂದು ದೂರಿದರು.
ಕೋಣಚಪ್ಪಳಿ, ನಗರಗುಂಡ, ಹೂವಿನಹೆಡಗಿ, ಜೋಳದಹೆಡಗಿ, ಲಿಂಗದಹಳ್ಳಿ, ಗೂಗಲ್, ಕೊಪ್ಪರ ಸೇರಿ ನದಿದಂಡೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಓವರ್‌ಲೋಡ್‌ನಿಂದ ರಾಯಚೂರು ಯಾದಗಿರಿ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಹೂವಿನಹೆಡಗಿ ಸೇತುವೆ ಹಾಗೂ ಗೂಗಲ್ ಬ್ರಿಡ್ಜ್ ಕಂ ಬ್ಯಾರೇಜ್ ಹಾಳಾಗುವ ಸಾಧ್ಯತೆಯಿದೆ. ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ತಾಲೂಕು ಅಧ್ಯಕ್ಷ ಬಸವರಾಜ ಗೋಪಳಾಪುರ ಮಾತನಾಡಿ, ಮರಳು ಅಕ್ರಮ ಸಾಗಣೆ ತಡೆಯಲು ಜಿಲ್ಲಾ ಹಾಗೂ ತಾಲೂಕು ಮರಳು ಸಮಿತಿಗಳು ಇದ್ದರೂ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ. ಚೆಕ್‌ಪೋಸ್ಟ್‌ಗಳು ನಿಸಕ್ರಿಯವಾಗಿವೆ. ಪೊಲೀಸ್ ಇಲಾಖೆ ಹಾಗೂ ತಹಸೀಲ್ದಾರ್‌ಗೆ ಮನವಿ ಮಾಡಿದರೆ ದಂಧೆ ತಡೆಯುವ ಬದಲು ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ನಾಮ್ ಕೇ ಅವಸ್ತೆ ಎನ್ನುವಂತೆ ಒಂದೆರಡು ದಾಳಿ ಮಾಡಿ ಕೈತೊಳೆದುಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು. ಮುಖಂಡರಾದ ಉಸ್ಮಾನ್ ಪಾಷಾ, ಭೀಮನಗೌಡ, ಶಿವಗೌಡ ದಳವಾಯಿದೊಡ್ಡಿ, ದೇವಪ್ಪ ನಾಯಕ, ಶಿವರಾಜ ನಾಯಕ ಇದ್ದರು.