ಮರಳು ದಂಧೆಗೆ ಮುಖ್ಯ ಪೇದೆ ಬಲಿ: ಒಂದು ಕೋಟಿ ರೂ. ಪರಿಹಾರಕ್ಕೆ ಬಂಜಾರಾ ಸಂಘದ ಆಗ್ರಹ

ಕಲಬುರಗಿ,ಜೂ.17: ಜೇವರ್ಗಿ ತಾಲ್ಲೂಕಿನ ಹುಲ್ಲೂರ್ ಚೆಕ್ ಪೋಸ್ಟ್ ಬಳಿ ಅಕ್ರಮ ಮರಳು ದಂಧೆ ತಡೆಯಲು ಹೋದ ಮುಖ್ಯ ಪೇದೆ ಮಯೂರ್ ಚವ್ಹಾಣ್ ಅವರಿಗೆ ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ್ದು, ಸಂತ್ರಸ್ತ ಕುಟುಂಬಕ್ಕೆ ರಾಜ್ಯ ಸರ್ಕಾರವು ಒಂದು ಕೋಟಿ ರೂ.ಗಳ ಪರಿಹಾರವನ್ನು ಕೊಡಬೇಕು ಎಂದು ಕರ್ನಾಟಕ ಪ್ರದೇಶ ಬಂಜಾರಾ (ಲಂಬಾಣಿ) ಸೇವಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ವಿಠಲ್ ಜಾಧವ್ ಅವರು ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ತೀರದಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುವವರಿಗೆ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಪೋಲಿಸ್ ನಿರೀಕ್ಷಕರು ಮತ್ತು ಪೋಲಿಸ್ ಪೇದೆಗಳೇ ಕಾರಣ. ಹುಲ್ಲೂರ್ ಘಟನೆಗೆ ಸಂಬಂಧಿಸಿದಂತೆ ನೆಲೋಗಿ ಪೋಲಿಸ್ ಠಾಣೆಯ ಪಿಐ ಅವರನ್ನು ಕೂಡಲೇ ಅಮಾನತ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.
ಅಕ್ರಮ ಮರಳು ಸಾಗಾಣಿಕೆ ಮಾಡುವುದರಿಂದ ಸಂಬಂಧಪಟ್ಟ ಠಾಣೆ ವ್ಯಾಪ್ತಿಯಲ್ಲಿ ಬರುವ ಪೋಲಿಸ್ ಇನ್ಸ್‍ಪೆಕ್ಟರ್ ಹಪ್ತಾ ವಸೂಲಿ ಮಾಡಿ ಮರಳು ದಂಧೆ ಮಾಡುವವರಿಗೆ ಪ್ರೋತ್ಸಾಹ ಮತ್ತು ಧೈರ್ಯ ನೀಡುತ್ತಿದ್ದು, ಪೋಲಿಸ್ ಅಧಿಕಾರಿಗಳ ಸಹಕಾರದಿಂದಲೇ ಅಕ್ರಮ ಮರಳು ದಂಧೆ ವ್ಯಾಪಕವಾಗಿ ಹಗಲು, ರಾತ್ರಿ ನದಿ ತೀರದಲ್ಲಿ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಇಂತಹ ಅಕ್ರಮ ಮರಳು ದಂಧೆ, ಸುಲಿಗೆ ಮತ್ತು ಕಳ್ಳತನ ಆಗುವುದಿಲ್ಲ ಎಂದು ಅವರು ತಿಳಿಸಿದರು.
ಎಲ್ಲ ತಾಲ್ಲೂಕುಗಳಲ್ಲಿ ನದಿಯ ದಂಡೆಗಳಲ್ಲಿ ಅಕ್ರಮವಾಗಿ ಮರಳು ಸಾಗಾಣಿಕೆ ನಡೆಯುತ್ತಿರುವ ದಂಧೆಯಾಗಿದೆ. ಇದನ್ನು ತಡೆಗಟ್ಟಲು ಸಂಪೂರ್ಣ ಠಾಣೆಯ ವ್ಯಾಪ್ತಿಯಲ್ಲಿ ಬರುವ ಠಾಣೆಯ ನಿರೀಕ್ಷಕರು ಜವಾಬ್ದಾರರು ಎಂದು ಅವರು ದೂಷಿಸಿದರು.
ಯಾವ ಠಾಣೆಯ ವ್ಯಾಪ್ತಿಯಲ್ಲಿ ಅಕ್ರಮ ಮರಳು ಸಾಗಾಣಿಕೆಯಾಗುತ್ತಿದೆಯೋ ಅಂತಹ ಸ್ಥಳವನ್ನು ಗಮನಿಸಿ ಅಂತಹ ಠಾಣೆಯ ನಿರೀಕ್ಷಕರನ್ನು ಅಮಾನತ್ತುಗೊಳಿಸಬೇಕು ಹಾಗೂ ಅವರಿಗೆ ಕಾನೂನು ರೀತಿಯಲ್ಲಿ ಶಿಕ್ಷೆಯನ್ನು ಕೊಡಿಸಬೇಕು ಎಂದು ಅವರು ಒತ್ತಾಯಿಸಿದರು.
ಘಟನೆಯಲ್ಲಿ ಮುಖ್ಯ ಪೇದೆ ಮಯೂರ್ ಅವರನ್ನು ಟ್ರ್ಯಾಕ್ಟರ್ ಹರಿಸಿ ಹತ್ಯೆ ಮಾಡಿದ್ದು ಖಂಡನಾರ್ಹ. ಈ ಕುರಿತು ಕೂಲಂಕುಷವಾಗಿ ಸೂಕ್ತ ತನಿಖೆ ಕೈಗೊಳ್ಳಬೇಕು. ಜಿಲ್ಲೆಯ ಎಲ್ಲ ತಾಲ್ಲೂಕುಗಳ ನದಿ ದಂಡೆಯಲ್ಲಿ ಅಕ್ರಮ ಮರಳು ದಂಧೆಯನ್ನು ಸಂಫೂರ್ಣವಾಗಿ ತಡೆಗಟ್ಟಬೇಕು ಎಂದು ಅವರು ಆಗ್ರಹಿಸಿದರು.
ಈಗಾಗಲೇ ಸಂತ್ರಸ್ತ ಮುಖ್ಯ ಪೇದೆ ಕುಟುಂಬಕ್ಕೆ ರಾಜ್ಯ ಸರ್ಕಾರವು ಮೂವತ್ತು ಲಕ್ಷ ರೂ.ಗಳನ್ನು ಘೋಷಿಸಿದೆ. ಇದು ಅಲ್ಪ ಪರಿಹಾರವಾಗಿದ್ದು, ಪರಿಹಾರ ಮೊತ್ತವನ್ನು ಒಂದು ಕೋಟಿ ರೂ.ಗಳಿಗೆ ಹೆಚ್ಚಿಸಬೇಕು ಹಾಗೂ ಅವರ ಕುಟುಂಬಸ್ಥರಿಗೆ ಒಬ್ಬರಿಗೆ ಸರ್ಕಾರಿ ಉದ್ಯೋಗ ಕೊಡುವಂತೆ ಹಾಗೂ ಮಕ್ಕಳ ಶಿಕ್ಷಣದ ವೆಚ್ಚವನ್ನು ಸರ್ಕಾರವೇ ನೋಡಿಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಜಿಲ್ಲೆಯಲ್ಲಿ ಹಿಂದೆ ಇರದಂತಹ ವೇಶ್ಯಾವಾಟಿಕೆ ಹೆಚ್ಚಾಗಿದೆ. ಅಪರಾಧಿ ಚಟುವಟಿಕೆಗಳೂ ಸಹ ಹೆಚ್ಚುತ್ತಿವೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆಯವರು ಈಗಾಗಲೇ ಅಧಿಕಾರಿಗಳ ಸಭೆ ಮಾಡಿದ್ದಾರೆ. ಕೇವಲ ಮಾತಿನಲ್ಲಿಯೇ ಕಟ್ಟುನಿಟ್ಟಿನ ಕ್ರಮಗಳ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಆದಾಗ್ಯೂ, ಅವು ಕಾರ್ಯರೂಪಕ್ಕೆ ಬರುತ್ತಿಲ್ಲ ಎಂದು ಅವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆಯವರು ಮಾತನಾಡಿದಂತೆ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದ ಅವರು, ಒಂದು ವೇಳೆ ಬೇಡಿಕೆಗಳಿಗೆ ಸ್ಪಂದಿಸದೇ ಹೋದಲ್ಲಿ ಉಗ್ರ ಸ್ವರೂಪದ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಸಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಬಂಜಾರಾ ಸಮಾಜದವರಿಗೆ ಕಡೆಗಣಿಸಲಾಗಿದೆ ಎಂದು ದೂರಿದ ಅವರು, ರಾಮಣ್ಣ ಲಮಾಣಿಯವರು ಬಂಜಾರಾ ಸಮಾಜದಿಂದ ಏಕೈಕ ಶಾಸಕರಾಗಿ ಆಯ್ಕೆಯಾಗಿದ್ದರೂ ಸಹ ಅವರಿಗೆ ಸಚಿವ ಸ್ಥಾನ ಕೊಟ್ಟಿಲ್ಲ. ಕೂಡಲೇ ಸಮಾಜಕ್ಕೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ರಾಮಣ್ಣ ಲಮಾಣಿಯವರಿಗೆ ಸಂಪುಟಕ್ಕೆ ಸೇರಿಸಬೇಕು ಎಂದು ಅವರು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ರಾಮಚಂದ್ರ ಜಾಧವ್, ಬಿ.ಬಿ. ನಾಯಕ್, ಸುರೇಶ್ ಜಾಧವ್, ಸಂತೋಷ್ ಆಡೆ, ತಿಪ್ಪಣ್ಣ ರಾಠೋಡ್, ಹೀರಾಮಣಿ ರಾಠೋಡ್, ಲಾಲಪ್ಪ ರಾಠೋಡ್, ವಿಶಾಲ್ ಚವ್ಹಾಣ್ ಮುಂತಾದವರು ಉಪಸ್ಥಿತರಿದ್ದರು.