
ಸಂಜೆವಾಣಿ ವಾರ್ತೆ
ದಾವಣಗೆರೆ, ಸೆ.10; ಲಾರಿಗಳಲ್ಲಿ ಅನುಮತಿ ಪಡೆದ ತೂಕಕ್ಕಿಂತ ಹೆಚ್ಚು ತೂಕದ ಮರಳನ್ನು ತುಂಬಿಕೊಂಡು ಸಾಗುತ್ತಿದ್ದ 2 ಲಾರಿಗಳನ್ನು ಪೊಲೀಸರು ಹಿಡಿದು, ಒಂದು ಲಾರಿಗೆ 21,560 ರು., ಮತ್ತೊಂದಕ್ಕೆ 24640 ರು.ಗಳ ದಂಡವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ವಿಧಿಸಿದ ಘಟನೆ ಹರಿಹರ ತಾಲೂಕಿನಲ್ಲಿ ನಡೆದಿದೆ.ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾ. ನಾಗೇನಹಳ್ಳಿ ಹಾಗೂ ಮುದೇನೂರು ಮರಳು ಪಾಯಿಂಟ್‌ಗಳಿಂದ ಬರುವ ಲಾರಿಗಳಲ್ಲಿ ಅನುಮತಿ ಪಡೆದ ತೂಕಕ್ಕಿಂತ ಹೆಚ್ಚು ಮರಳನ್ನು ತುಂಬಿಕೊಂಡುಬರುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಹರಿಹರ ಪೊಲೀಸರು ತಡೆದು, ಪರಿಶೀಲಿಸಿದರು.ಲಾರಿಗಳಲ್ಲಿ ತುಂಬಿದ್ದ ಮರಳನ್ನು ಹಾಗೂ ಅನುಮತಿ ಪತ್ರ ಪರಿಶೀಲಿಸಿದಾಗ ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮರಳು ತುಂಬಿಕೊಂಡಿದ್ದು ಕಂಡು ಬಂದಿತು. ಪ್ರಾದೇಶಿಕ ಸಾರಿಗೆ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಗಮನಕ್ಕೆ ಈ ವಿಚಾರ ತರಲಾಯಿತು. ನಂತರ ಎರಡೂ ಲಾರಿಗಳಲ್ಲಿ ನಿಗದಿಗಿಂತ ಹೆಚ್ಚು ಮರಳು ತುಂಬಿಕೊಂಡು ಸಾಗಿಸುತ್ತಿದ್ದುದು ಖಚಿತವಾಯಿತು.ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ, ಒಂದು ಲಾರಿಗೆ 21560 ರು., ಮತ್ತೊಂದು ಲಾರಿಗೆ 24640 ರು. ದಂಡ ವಿಧಿಸಿದ್ದಾರೆ. ಎಲ್ಲಾ ಮರಳು ಸಾಗಾಟ ಮಾಡುವವರು ಅನುಮತಿ ಪಡೆದಿದ್ದಕ್ಕಿಂತ ಹೆಚ್ಚು ಮರಳು ತುಂಬಿಕೊಂಡು ಸಾಗಾಟ ಮಾಡುತ್ತಿರುವುದು ಕಂಡು ಬಂದರೆ, ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದ್ದಾರೆ.