ಮರಳು ಅಕ್ರಮ ತಡೆಗೆ ತಂಡ ರಚನೆ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ : ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿ ಮರಳು ಅಕ್ರಮ ಚಟುವಟಿಕೆ ತಡೆಯಲು ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಂಡಗಳನ್ನು ರಚಿಸಲಾಗುತ್ತಿದೆ. ದಿನದ 24 ಗಂಟೆ ತಂಡಗಳು ನದಿ ತೀರದಲ್ಲಿ ಕಣ್ಗಾವಲು ಇರಿಸಬೇಕು ಎಂದು ಹರಪನಹಳ್ಳಿ ಉಪ ವಿಭಾಗದ ಸಹಾಯಕ ಆಯುಕ್ತ ಟಿ.ವಿ.ಪ್ರಕಾಶ್ ಸೂಚಿಸಿದರು.
ತಾಲೂಕು ಕಚೇರಿಯಲ್ಲಿ ತಾಲೂಕು ಮಟ್ಟದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನದಿ ತೀರದಲ್ಲಿ ನಿಯಮ ಉಲ್ಲಂಘಿಸಿ ಯಾರಾದರೂ ಮರಳು ಸಾಗಣೆ, ಮರಳು ಗಣಿಗಾರಿಕೆ ನಡೆಸಿದಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಮರಳು ಅಕ್ರಮ ಕುರಿತು ಸಾರ್ವಜನಿಕರು ನೀಡುವ ದೂರು, ಮಾಹಿತಿಗಳನ್ನು ಗಂಭೀರವಾಗಿ ಪರಿಗಣಿಸಿ ಕ್ರಮ ಜರುಗಿಸಬೇಕು ಎಂದು ತಿಳಿಸಿದರು.
ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಕೃಷಿ ಚಟುವಟಿಕೆ ಉದ್ದೇಶಕ್ಕೆ ಬಳಸಬೇಕಾದ ಟ್ರ್ಯಾಕ್ಟರ್‍ಗಳನ್ನು ಮರಳು ಸಾಗಣೆಗೆ ಬಳಸಲಾಗುತ್ತಿದೆ. ನಂಬರ್ ಪ್ಲೇಟ್ ಇಲ್ಲದ ಟ್ರ್ಯಾಕ್ಟರ್‍ಗಳಲ್ಲಿ ಮರಳು ಸಾಗಣೆ ಮಾಡಲಾಗುತ್ತಿದೆ. ಇಂತಹ ವಾಹನಗಳನ್ನು ಪತ್ತೆ ಹಚ್ಚಿ ಕ್ರಮ ಜರುಗಿಸಲು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.
ತಹಶೀಲ್ದಾರ್ ಕೆ.ಶರಣಮ್ಮ, ತಾ.ಪಂ ಇಒ ಎಸ್.ಎಸ್.ಪ್ರಕಾಶ್ ಹಾಗೂ ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.