ಮರಳು ಅಕ್ರಮಕ್ಕೆ ಕಡಿವಾಣ ಹಾಕಲು ಆಗ್ರಹ

ಗಬ್ಬೂರು.ಮಾ.೨೪-ಮರಳು ಗಣಿಗಾರಿಕೆ ಗುತ್ತಿಗೆದಾರರು ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿ ಮರಳು ಗಣಿಗಾರಿಕೆ ಮಾಡುತ್ತಿದ್ದಾರೆ. ಮರಳು ಸಂಗ್ರಹಿಸಲು ಬೃಹತ್ ಯಂತ್ರೋಪಕರಣ ಬಳಸಲಾಗುತ್ತಿದೆ.
ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಮ್ ಆದ್ಮಿ ಪಾರ್ಟಿ ತಾಲೂಕು ಅಧ್ಯಕ್ಷ ಭೀಮರಾಯ ನಾಯಕ ಜರದಬಂಡಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಸಂಜೆ – ವಾಣಿಯೊಂದಿಗೆ ಕರೆ ಮಾಡಿ ಮಾತನಾಡಿದ ಅವರು, ಅಕ್ರಮ ಮರಳು ಗಣಿಗಾರಿಕೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ಹೇಳಿದ್ದಾರೆ.
ಅಕ್ರಮವಾಗಿ ಹಾಗೂ ಕಾನೂನು ಬಾಹಿರವಾಗಿ ಮರಳು ಗಣಿಗಾರಿಕೆ ಮಾಡುವರ ಮೇಲೆ ಹಲವಾರು ದೂರುಗಳನ್ನು ದಾಖಲಿಸಿದ್ದೇವೆ. ಸಚಿವರು ಮೊದಲು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೃಷ್ಣ ನದಿ ದಂಡೆಯ ಮೇಲೆ ಅಕ್ರಮವಾಗಿ ಮರಳು ಸಂಗ್ರಸಿರುವವರ ಎಲ್ಲ ದಾಖಲೆಗಳನ್ನು ಸಂಗ್ರಹಿಸಿ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಲಾಗಿದೆ.
ಕೇವಲ ಒಂದು ಪಾಸ್ ಪಡೆದು ಜಿಪಿಎಸ್ ಬಂದ್ ಮಾಡಿ ಅದೇ ಪಾಸ್ ನಲ್ಲಿ ಹಲವಾರು ಲೋಡ್ ಮರಳು ಸಾಗಿಸುತ್ತಾರೆ. ಅಕ್ರಮ ಮರಳು ಗಣಿಗಾರಿಕೆಯಲ್ಲಿ ಅಧಿಕಾರಿಗಳು ಶಾಮಿಲಾಗಿರುವುದು ಸ್ವಷ್ಟವಾಗಿದೆ. ಅಧಿಕಾರಿಗಳು ತಮ್ಮ ಹಿಂಬಾಲಕರು, ವಾಹನ ಚಾಲಕರ ಮೂಲಕ ಭ್ರಷ್ಟಾಚಾರ ಮಾಡುತ್ತಿದ್ದಾರೆ. ಅಕ್ರಮ ಮರಳು ಗಣಿಗಾರಿಕೆಗೆ ಅನುಕೂಲವಾಗಲಿ ಎನ್ನುವ ಕಾರಣದಿಂದ ಹಳ್ಳಿಕೇರಿಯಂತಹ ದೂರದ ಗ್ರಾಮಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ. ಅಕ್ರಮ ಮರಳು ಗಣಿಗಾರಿಕೆ ಮಾಡುವವರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಸಚಿವರು ಸಿಒಡಿ ತನಿಖೆಗೆ ಒಳಪಡಿಸಬೇಕು ಎಂದರು.