ಮರಳಿ ಬಂದ ರಾಧಿಕಾ ಕುಮಾರಸ್ವಾಮಿ

* ಚಿ.ಗೋ ರಮೇಶ್

ವಿಭಿನ್ನ ಕಥಾಹಂದರ ಹೊಂದಿರುವ ” ಅಜಾಗ್ರತ” ಚಿತ್ರದ ಮೂಲಕ ನಟಿ ರಾಧಿಕಾ ಕುಮಾರಸ್ವಾಮಿ ಬೆಳ್ಳಿ ಪರದೆಯ ಮೇಲೆ ಮತ್ತೆ ಮೋಡಿ ಮಾಡಲು ಮುಂದಾಗಿದ್ದಾರೆ. ಸ್ವೀಟಿ ಮತ್ತು ದಮಯಂತಿ ಚಿತ್ರದ‌ ನಂತರ ರಾಧಿಕಾ ಕುಮಾರಸ್ವಾಮಿ ಅವರ ಬಹುಭಾಷೆಯ ಚಿತ್ರ ಇದಾಗಿದೆ.

ರಾಧಿಕಾ ಕುಮಾರಸ್ವಾಮಿ  ನಾಯಕಿಯಾಗಿ ನಟಿಸುತ್ತಿರುವ  “ಅಜಾಗ್ರತ” ಚಿತ್ರದ ಮುಹೂರ್ತ ಇದೇ ಶನಿವಾರ  ಹೈದರಾಬಾದ್ ನ ರಾಮನಾಯ್ಡು ಸ್ಟುಡಿಯೋದಲ್ಲಿ ನಡೆಯಲಿದೆ‌.

ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ  ಚಿತ್ರ ನಿರ್ಮಾಣವಾಗುತ್ತಿದ್ದು ರಾಧಿಕಾ ಅವರ ಸಹೋದರ ರವಿರಾಜ್  ಚಿತ್ರವನ್ನು ನಿರ್ಮಿಸುತ್ತಿದ್ದಾರೆ. “ಅಜಾಗ್ರತ ” ಒಂದು ಸೈಕಾಲಜಿಕಲ್  ಕ್ರೈಂ ಥ್ರಿಲ್ಲೆರ್ ಕಥೆ ಹೊಂದಿರುವ ಚಿತ್ರವಾಗಿದೆ. ಏಳು ಭಾಷೆಗಳಲ್ಲಿಯೂ ನೇರ ಚಿತ್ರೀಕರಣವಾಗುತ್ತಿರುವುದು ಇದರ ವಿಶೇಷ.

ಯುವ ನಿರ್ದೇಶಕ ಎಂ.ಶಶಿಧರ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು  ವಿ, ಎಫ್ ಎಕ್ಸ್ ನಲ್ಲೂ ಪರಿಣತಿ ಹೊಂದಿದ್ದಾರೆ. ಅಶ್ವಿನಿ ರಾಮ್ ಪ್ರಸಾದ್ ಅವರ ಪುತ್ರ ಅರುಣ್ ರಾಮ್ ಪ್ರಸಾದ್ ಅಭಿನಯದ “ಘಾರ್ಗ” ಚಿತ್ರ ನಿರ್ದೇಶಿಸಿರುವ ಶಶಿಧರ್ ಅವರಿಗೆ ಇದು ಎರಡನೇ ನಿರ್ದೇಶನದ ಚಿತ್ರ. ಚಿತ್ರದಲ್ಲಿ ರಾಧಿಕಾ ಕುಮಾರಸ್ವಾಮಿ, ಸ್ಪರ್ಶ ರೇಖಾ, ದೇವರಾಜ್, ಸುಚೇಂದ್ರ ಪ್ರಸಾದ್, ವಿನಯ್ ಪ್ರಸಾದ್, ಚಿತ್ರ ಶೆಣೈ, ಮುಂತಾದವರು .

ಹಾಗೆ ತೆಲುಗು ಚಿತ್ರರಂಗದ ರಾವ್ ರಮೇಶ್, ಪುಷ್ಪ ಸುನಿಲ್, ರಾಘವೇಂದ್ರ ಶ್ರವಣ್,  ಕಾಲಿವುಡ್ ನಿಂದ ಆದಿತ್ಯ ಮೆನನ್, ಸಮುದ್ರ ಕಣಿ, ಜಯ್ ಪ್ರಕಾಶ್ ಮತ್ತು ಬಾಲಿವುಡ್ ನ ಶ್ರೇಯಸ್ ತಲಪಾಡೆ ನಾಯಕ ನಟನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ಚಿತ್ರ ಪ್ರೇಮಿಗಳಿಗೆ ಹೊಸ ಅನುಭವ ಕೊಡಲು ಅವರವರ ಭಾಷೆ ಯಲ್ಲಿ ಚಿತ್ರೀಕರಿಸಿ, ಅವರವರಭಾಷೆ ಯಲ್ಲೇ  “ಅಜಾಗ್ರತ ” ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರ ತಂಡ ತಯಾರಿ ನಡೆಸಿದೆ.

ಮತ್ತೆ ಬಣ್ಣ ಹಚ್ಚಿದ ತಾರೆ

ನಟಿ ರಾಧಿಕಾ ಕುಮಾರಸ್ವಾಮಿ ಒಂದಷ್ಟು ಬಿಡುವಿನ ಬಳಿಕ ಮತ್ತೆ ಬಣ್ಣ ಹಚ್ಚಿದ್ದು ಈ ಬಾರಿ ಅವರ ಚಿತ್ರ ಏಳು ಭಾಷೆಯಲ್ಲಿ ತೆರೆಗೆ ಬರಲಿದೆ.

ಅವರ ಸಹೋದರನೇ ಚಿತ್ರಕ್ಕೆ ಬಂಡವಾಳ ಹಾಕಿದ್ದು ಚಿತ್ರ ಸೆಟ್ಟೇರಲು ಸಜ್ಜಾಗಿದೆ. ಅಜಾಗ್ರತ ಚಿತ್ರದ ಮೂಲಕ ಮೋಡಿ ಮಾಡಲು ಸಜ್ಜಾಗಿದ್ದಾರೆ.