ಮರಳಿನ ಮೂಟೆ ಹೊತ್ತು ಗಜಪಡೆ ತಾಲೀಮು

ಮೈಸೂರು. ಸೆ.26: ವಿಶ್ವವಿಖ್ಯಾತ ಮೈಸೂರು ದಸರಾ 2021ರ ಹಿನ್ನೆಲೆಯಲ್ಲಿ ಸಕಲ ಸಿದ್ಧತೆಗಳು ನಡೆಯುತ್ತಿವೆ. ಕಳೆದ ವಾರವೇ ಅರಮನೆಗೆ ಗಜಪಡೆ ಆಗಮಿಸಿದ್ದು, ಗಜಪಡೆಗಳಿಗೆ ಮರಳಿನ ಮೂಟೆ ಹೊರುವ ತಾಲೀಮು ಶುರುವಾಗಿದೆ.
ಅಭಿಮನ್ಯು ನೇತೃತ್ವದ 8 ಆನೆಗಳಿಂದ ಮರಳು ಮೂಟೆ ಹೊರುವ ತಾಲೀಮು ನಡೆದಿದೆ. ಈ ಬಾರಿ ಸರಳ ಮತ್ತು ಸಾಂಪ್ರದಾಯಿಕ ದಸರಾ ಆಚರಿಸುವ ಹಿನ್ನೆಲೆಯಲ್ಲಿ ಅರಮನೆ ಆವರಣದಲ್ಲಿ ಮಾತ್ರ ಗಜಪಡೆಗಳ ತಾಲೀಮು ನಡೆಯಲಿದೆ.
ಇಂದು ಬೆಳಗ್ಗೆ ಅರಮನೆಯ ಸುತ್ತ ಒಂದು ಸುತ್ತು ಹಾಕಿದ ದಸರಾ ಆನೆಗಳ ತಾಲೀಮು ಆರಂಭಕ್ಕೂ ಮುನ್ನ ಮಾವುತ, ಕಾವಾಡಿಗಳಿಂದ ಸ್ಯಾನಿಟೈಸ್ ಸಿಂಪಡಣೆ ಮಾಡಲಾಯಿತು.
ಅರಮನೆ ಆವರಣದಲ್ಲಿ ಗಾಂಭೀರ್ಯದಿಂದ ಹೆಜ್ಜೆ ಹಾಕಿದ ದಸರಾ ಆನೆಗಳಾದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಅಶ್ವತ್ಥಾಮ, ವಿಕ್ರಮ, ಧನಂಜಯ, ಕಾವೇರಿ, ಚೈತ್ರ, ಗೋಪಾಲಸ್ವಾಮಿ, ಲಕ್ಷ್ಮಿ ಒಳಗೊಂಡ 8 ಆನೆಗಳ ತಂಡ ತಾಲೀಮು ನಡೆಸಿದವು. ಕೇವಲ 20 ನಿಮಿಷದಲ್ಲಿ ಗಜಪಡೆ ತಾಲೀಮು ಮುಗಿಸಿತು.
759 ಕೆ.ಜಿ. ತೂಕವಿರುವ ಚಿನ್ನದ ಅಂಬಾರಿಯನ್ನು ಹೊರಲಿರುವ ಅಭಿಮನ್ಯುವಿಗೆ ಮರಳಿನ ಮೂಟೆ ಹೊರಿಸುವ ಮೂಲಕ ತಾಲೀಮು ನಡೆಸಲಾಯಿತು.
ಕೊರೊನಾ ಸೋಂಕು ಕಾರಣದಿಂದ ಸರಳ ಮತ್ತು ಸಾಂಪ್ರದಾಯಿಕವಾಗಿ ಮೈಸೂರು ದಸರಾ ಆಚರಣೆಯಾಗುತ್ತಿರುವುದರಿಂದ ಮೇಲ್ನೋಟಕ್ಕೆ ಸಂಭ್ರಮ ಅರಮನೆಗಷ್ಟೆ ಸೀಮಿತವಾದಂತೆ ಗೋಚರಿಸುತ್ತಿದ್ದರೂ ಈ ಸಂಬಂಧದ ಸಿದ್ಧತೆಗಳು ಮಾತ್ರ ಸಮಾರೋಪಾದಿಯಲ್ಲಿ ಸಾಗುತ್ತಿದೆ.