ಮರಳಿನಲ್ಲಿ ಅರಳಿದ ತಂಬಾಕು ವಿರೋಧಿ ಕಲಾಕೃತಿ

ಪುರಿ (ಒಡಿಶಾ), ಮೇ ೩೧-ವಿಶ್ವ ತಂಬಾಕು ವಿರೋಧಿ ದಿನದ ಅಂಗವಾಗಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು ಪುರಿಯ ಸಮುದ್ರ ತೀರದಲ್ಲಿ ಸುಂದರ ಮರಳು ಕಲಾಕೃತಿ ರಚಿಸಿದ್ದಾರೆ.
ಈ ಬಾರಿಯ ವಿಶ್ವ ತಂಬಾಕು ರಹಿತ ದಿನಾಚರಣೆಯ ಧ್ಯೇಯ ವಾಕ್ಯ ’ನಮಗೆ ಆಹಾರ ಬೇಕು, ತಂಬಾಕು ಬೇಡ’ ಎಂಬುದಾಗಿದೆ.
ತಂಬಾಕು ಸೇವನೆಯಿಂದಾಗುವ ಹಾನಿಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿ ವರ್ಷ ಮೇ ೩೧ರಂದು ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ.
ಪರ್ಯಾಯ ಬೆಳೆ ಉತ್ಪಾದನೆ ಮತ್ತು ಮಾರುಕಟ್ಟೆ ಅವಕಾಶಗಳ ಬಗ್ಗೆ ತಂಬಾಕು ಬೆಳೆಗಾರರಲ್ಲಿ ಜಾಗೃತಿ ಮೂಡಿಸಿ ಸುಸ್ಥಿರ ಮತ್ತು ಪೌಷ್ಠಿಕ ಬೆಳೆ ಬೆಳೆಯಲು ಪ್ರೋತ್ಸಾಹಿಸುವುದು ಈ ವರ್ಷದ ಧ್ಯೇಯವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಆಗ್ನೇಯ ಏಷ್ಯಾ ವಿಭಾಗದ ಪ್ರಾದೇಶಿಕ ನಿರ್ದೇಶಕಿ ಡಾ. ಪೂನಂ ಖೇತ್ರಪಾಲ್ ಸಿಂಗ್ ಮಾತನಾಡಿ, ತಂಬಾಕು ಕೃಷಿಯು ವಿಶ್ವದಾದ್ಯಂತ ಆಹಾರ ಅಭದ್ರತೆಯನ್ನು ಹೆಚ್ಚಿಸಲು ಕೊಡುಗೆ ನೀಡುತ್ತದೆ. ತಂಬಾಕು ಉತ್ಪನ್ನಗಳನ್ನು ಬೆಳೆಯುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಪ್ರಪಂಚದಾದ್ಯಂತ ವಾರ್ಷಿಕವಾಗಿ ಸುಮಾರು ೩೫ ಲಕ್ಷ ಹೆಕ್ಟೇರ್ ಭೂಮಿಯನ್ನು ತಂಬಾಕು ಕೃಷಿಗಾಗಿ ಬಳಸಲಾಗುತ್ತದೆ. ತಂಬಾಕು ಕೃಷಿಯಿಂದ ಉಂಟಾಗುವ ವಾರ್ಷಿಕ ಅರಣ್ಯನಾಶವು ೨ ಲಕ್ಷ ಹೆಕ್ಟೇರ್ ಎಂದು ಅಂದಾಜಿಸಲಾಗಿದೆ.
ಆಗ್ನೇಯ ಏಷ್ಯಾ ಪ್ರದೇಶದಲ್ಲಿ, ಕೃಷಿ ಮತ್ತು ತಂಬಾಕು ಉತ್ಪಾದನೆಯಲ್ಲಿ ಎಕರೆಗಟ್ಟಲೆ ಭೂಮಿಯಲ್ಲಿ ಭಾರತ ಮುಂಚೂಣಿಯಲ್ಲಿದೆ, ನಂತರದ ಸ್ಥಾನದಲ್ಲಿ ಇಂಡೋನೇಷ್ಯಾ ಇದೆ. ಬಾಂಗ್ಲಾದೇಶ, ಡಿಪಿಆರ್ ಕೊರಿಯಾ, ಥೈಲ್ಯಾಂಡ್, ಮ್ಯಾನ್ಮಾರ್ ಮತ್ತು ಶ್ರೀಲಂಕಾದಲ್ಲೂ ತಂಬಾಕು ಬೆಳೆಯಲಾಗುತ್ತಿದೆ.
೧೦ ಅತಿದೊಡ್ಡ ತಂಬಾಕು ಬೆಳೆಗಾರರಲ್ಲಿ ಒಂಬತ್ತು ಕಡಿಮೆ-ಮತ್ತು ಮಧ್ಯಮ-ಆದಾಯದ ದೇಶಗಳು, ಮತ್ತು ಇವುಗಳಲ್ಲಿ ನಾಲ್ಕು ಕಡಿಮೆ-ಆದಾಯದ ಆಹಾರ-ಕೊರತೆಯ ದೇಶಗಳು ಎಂದು ವ್ಯಾಖ್ಯಾನಿಸಲಾಗಿದೆ.