
ನವದೆಹಲಿ,ಆ.೯-ಮರಣ ಹೊಂದಿದ ಬಳಿಕವೂ ಎರಡು ಸಾವಿರಕ್ಕೂ ಹೆಚ್ಚು ಜನರಿಗೂ ಪಿಂಚಣಿ ಪಾವತಿ ಮಾಡಲಾಗಿದೆ ಎಂದು ಸಂಸತ್‌ನಲ್ಲಿ ಮಂಡಿಸಲಾದ ಭಾರತದ ಕಂಟ್ರೋಲರ್ ಮತ್ತು ಆಡಿಟರ್ ಜನರಲ್ ವರದಿಯು ತೋರಿಸಿದೆ.
ರಾಷ್ಟ್ರೀಯ ಸಾಮಾಜಿಕ ನೆರವು ಕಾರ್ಯಕ್ರಮದ ಕಾರ್ಯಕ್ಷಮತೆಯ ಲೆಕ್ಕಪರಿಶೋಧನೆಯಲ್ಲಿ ಸಿಎಜಿ ಗಮನ ಸೆಳೆದಿರುವ ಹಲವು ಗಮನಾರ್ಹ ಲೋಪಗಳಲ್ಲಿ ಇದೂ ಕೂಡ ಒಂದು. ಬಡತನ ರೇಖೆಗಿಂತ ಕೆಳಗಿರುವ ವೃದ್ಧರು, ವಿಧವೆಯರು ಮತ್ತು ಅಂಗವಿಕಲರಿಗೆ ಮೂಲ ಆರ್ಥಿಕ ನೆರವು ನೀಡುವ ಗುರಿಯನ್ನು ಈ ಯೋಜನೆ ಹೊಂದಿದೆ.
ಫಲಾನುಭವಿಗಳ ಮರಣವನ್ನು ಗ್ರಾಮ ಪಂಚಾಯತ್/ಪುರಸಭೆಗಳು ಸಕಾಲದಲ್ಲಿ ವರದಿ ಮಾಡುತ್ತಿಲ್ಲ ಎಂದು ಲೆಕ್ಕ ಪರಿಶೋಧಕರು ಗಮನಿಸಿದ್ದಾರೆ. ಅವರ ಮರಣದ ನಂತರವೂ ಪಿಂಚಣಿ ನೀಡಿದ ೨,೧೦೩ ಜನರಲ್ಲಿ, ಗರಿಷ್ಠ ೪೫೩ ಪ್ರಕರಣಗಳು ಪಶ್ಚಿಮ ಬಂಗಾಳ, ನಂತರ ಗುಜರಾತ್‌ನಲ್ಲಿ ೪೧೩ ಮತ್ತು ತ್ರಿಪುರಾದಲ್ಲಿ ೨೫೦ ಪ್ರಕರಣಗಳು ಕಂಡುಬಂದಿವೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಜಾರಿಗೊಳಿಸಲಾದ ಎನ್‌ಎಸ್‌ಎಪಿ ಅಡಿಯಲ್ಲಿ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಪಿಂಚಣಿ ಯೋಜನೆ ಇಂದಿರಾ ಗಾಂಧಿ ರಾಷ್ಟ್ರೀಯ ವಿಧವಾ ಪಿಂಚಣಿ ಯೋಜನೆ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ಅಂಗವಿಕಲ ಪಿಂಚಣಿ ಯೋಜನೆ ಎಂಬ ಮೂರು ಉಪ ಯೋಜನೆಗಳ ಅಡಿಯಲ್ಲಿ ಮಾಸಿಕ ಪಿಂಚಣಿ ನೀಡಲಾಗುತ್ತದೆ.