ಮರಣದ ನಂತರವೂ ಜೀವಿಸಿರುವ ಪುನೀತ್: ರಾಮೇಗೌಡ

ಸಂಜೆವಾಣಿ ನ್ಯೂಸ್
ಮೈಸೂರು: ಮಾ.18:- ಕರುನಾಡು ರತ್ನ ಡಾಕ್ಟರ್ ಪುನೀತ್ ರಾಜ್ ಕುಮಾರ್ ರವರ 49ನೇ ಜನ್ಮದಿನಾಚರಣೆ ಅಂಗವಾಗಿ ಭುವನೇಶ್ವರಿ ಸೇವಾ ಟ್ರಸ್ಟ್ ಹಾಗೂ ಪುನೀತ್ ರಾಜಕುಮಾರ್ ಅಭಿಮಾನಿ ಬಳಗದ ವತಿಯಿಂದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಮುಂಭಾಗದಲ್ಲಿರುವ ಡಾಕ್ಟರ್ ರಾಜಕುಮಾರ್ ಉದ್ಯಾನವನದಲ್ಲಿ ವಿವಿಧ ಜಾತಿಯ ಸಸಿಗಳನ್ನು ನೆಟ್ಟು ಆನಂತರ ಸಿಹಿ ವಿತರಿಸಿ ಡಾಕ್ಟರ್ ರಾಜಕುಮಾರ್ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ರಾಮೇಗೌಡ ತಿಳಿಸಿದರು.
ಮಾತನಾಡಿದ ಅವರು ಜನನವಾದ ಮೇಲೆ ಮರಣ ನಿಶ್ಚಿತ. ಮರಣಿಸಿದ ನಂತರವೂ ಜನರ ಮನಸ್ಸಿನಲ್ಲಿ ಜೀವಂತ ವಾಗಿರುವಂತೆ ಬದುಕಬೇಕು. ಅಂಥ ಬದುಕು ಪುನೀತ್ ರಾಜ್‍ಕುಮಾರ್ ಅವರದ್ದಾಗಿತ್ತು ಅಭಿಪ್ರಾಯಪಟ್ಟರು.
ಶ್ರೀಮಂತಿಕೆ, ಜೀವಿತಾವಧಿ ಮುಖ್ಯವಲ್ಲ. ಹೇಗೆ ಬದುಕಿದ್ದರು ಎಂಬುದೇ ಮುಖ್ಯ. ಸಂತ ಕಬೀರರು ಹೇಳಿದಂತೆ ನಾವು ಮರಣಿಸಿದಾಗ ಜನರಿಗೆ ದುಃಖವಾದರೆ ಅದು ಸಾರ್ಥಕ ಬದುಕಾಗುತ್ತದೆ. ಅವರ ಬದುಕಿನ ದಿನಗಳಲ್ಲಿ ಪುನೀತ್ ಸಾವಿರಾರು ಜನರಿಗೆ ಆಸರೆಯಾಗಿದ್ದರು. ಅನೇಕ ವೃದ್ಧಾಶ್ರಮ, ಅನಾಥಾಶ್ರಮಗಳಿಗೆ ಧನ ಸಹಾಯ ಮಾಡಿದ್ದರು. ಪ್ರಚಾರ ಬಯಸದೇ ಕರ್ಣನ ರೀತಿಯಲ್ಲಿ ಕೊಡುಗೈ ದಾನಿಯಾಗಿದ್ದರು. ಸಂಬಂಧ ವಿಲ್ಲದವರು ಕೂಡ ಅವರ ಸಾವಿಗೆ ದುಃಖಪಟ್ಟಿದ್ದಾರೆ. ಶಾರೀರಿಕವಾಗಿ ನಮ್ಮನ್ನಗಲಿದರೂ ಅವರಿಗೆ ಸಾವಿಲ್ಲ, ಅವರು ಅಜರಾಮರ ಎಂದು ಬಂದರು.
ಪುನೀತ್ ರಾಜಕುಮಾರ್ ಅದ್ಭುತ ನಟ. ಬಾಲ್ಯದಿಂದಲೇ ನಟನೆ ಯಲ್ಲಿ ತೊಡಗಿಕೊಂಡಿದ್ದ ಅವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಅಂತಹ ಅಭಿಮಾನದ ವಿದಾಯ ಎಲ್ಲರಿಗೂ ಸಿಗುವುದಿಲ್ಲ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ವಿದ್ಯಾ, ಸೇತುರಾಮ್, ಚಂದ್ರು, ಗಂಗಪ್ಪ, ಬೇಗೂರು ಮೂರ್ತಿ, ವಿಶ್ವಮಾನವ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷರಾದ ರಾಘವೇಂದ್ರ ರಾವ್, ಸೌಮ್ಯರಾವ್, ಕಾರ್ಯದರ್ಶಿ ರಮೇಶ್, ಶ್ರೀ ಭುವನೇಶ್ವರಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಾಗಶ್ರೀ ಸುಚಿಂದ್ರ, ಗಂಧದಗುಡಿ ಅಪ್ಪು ಅಭಿಮಾನಿಗಳ ಬಳಗ ಅಧ್ಯಕ್ಷರಾದ ರವಿ, ಆಟೋ ಶಿವ, ಕೃಷ್ಣಣ್ಣ, ರಾಜೇಂದ್ರ, ಜಯರಾಮ್, ಚಕ್ರಪಾಣಿ, ಅರಿವು ಸಂಸ್ಥೆ ಅಧ್ಯಕ್ಷರಾದ ಶ್ರೀಕಾಂತ್ ಕಶ್ಯಪ್, ಸುಚಿಂದ್ರ, ಹಾಗೂ ಇನ್ನಿತರರು ಭಾಗವಹಿಸಿದರು