ಮರಗೊಂಡ್ ರಚಿತ 44 ಮೇರು ಕನ್ನಡಿಗರ ಭಾವಚಿತ್ರಗಳ ಕಲಾಪ್ರದರ್ಶನ ಆರಂಭ

ಕಲಬುರಗಿ,ನ.18:ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ ಚಿತ್ರ ಕಲಾವಿದ ಬಾಲಾಜಿ ಮರಗೊಂಡ್ ಅವರು ರಚಿಸಿದ ಆಯ್ದ ಸುಮಾರು 44 ಮೇರು ಕನ್ನಡಿಗರ ಭಾವಚಿತ್ರಗಳ ಕಲಾ ಪ್ರದರ್ಶನವು ದೃಶ್ಯನಮನ (ಕರ್ನಾಟಕದಲ್ಲಿ ಕನ್ನಡವೆಂಬ ಸಂಸ್ಕøತಿಯನ್ನು ರೂಪಿಸಿದ ಆಯ್ದ ಕನ್ನಡಿಗರ ದೃಶ್ಯ ನಿರೂಪಣೆ) ಇದೇ ನವೆಂಬರ್ 20ರಿಂದ 23ವರೆಗೆ ನಗರದ ಮಾತೋಶ್ರೀ ನೀಲಗಂಗಮ್ಮ ಗುರಪ್ಪ ಅಂದಾನಿ ಆರ್ಟ್‍ಗ್ಯಾಲರಿಯಲ್ಲಿ ಆಯೋಜಿಸಲಾಗಿದೆ ಎಂದು ಚಿತ್ರ ಕಲಾವಿದ ಹಾಗೂ ಛಾಯಾಚಿತ್ರಕಾರ ನಾರಾಯಣ್ ಎಂ. ಜೋಶಿ ಅವರು ತಿಳಿಸಿದ್ದಾರೆ.
ನವೆಂಬರ್ 20ರಂದು ಶನಿವಾರ ಸಂಜೆ 5-30 ಗಂಟೆಗೆ ಡಾ. ಬಿ.ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ನಿರ್ದೇಶಕ ಡಾ ವೀರಣ್ಣ ದಂಡೆ ಅವರು ಪ್ರದರ್ಶನ ಉದ್ಘಾಟಿಸುವರು. ವಿಜುವೆಲ್ ಆರ್ಟ್ ಪ್ರಿನ್ಸಿಪಾಲ್ ಶೇಷರಾವ್ ಆರ್. ಬಿರಾದಾರ್, ದಿ ಐಡಿಯಲ್ ಫೈನ್ ಆರ್ಟ್ ಇನ್ಸಿಟ್ಯೂಟ್ ಪ್ರಿನ್ಸಿಪಾಲ್ ಲೋಕಯ್ಯ ಕೆ. ಮಠಪತಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸುವರು. ಹಿರಿಯ ಕಲಾವಿದ ವಿ.ಬಿ. ಬಿರಾದಾರ್ ಅವರು ಅಧ್ಯಕ್ಷತೆ ವಹಿಸುವರು ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.
ಚಿತ್ರಕಲಾ ಪ್ರದರ್ಶನವನ್ನು ನವೆಂಬರ್ 20ರಿಂದ 23 ರವರೆಗೆ ಬೆಳಿಗ್ಗೆ 11ರಿಂದ ಸಾಯಂಕಾಲ 6ರವರೆಗೆ ಚಿತ್ರಕಲಾವಿದರು ಮತ್ತು ಕಲಾಸಕ್ತರು, ಸಾರ್ವಜನಿಕರು ವಿಕ್ಷೀಸಬಹುದು ಎಂದು ಅವರು ತಿಳಿಸಿದ್ದಾರೆ.
ಪ್ರಸ್ತುತ ಪ್ರದರ್ಶನದಲ್ಲಿ ಕಲಾವಿದ ಬಾಲಾಜಿ ಮರಗೊಂಡ್ ಅವರು ಆಯ್ದ ನಲವತ್ನಾಲ್ಕು ಮೇರು ಕನ್ನಡಿಗರ ಭಾವಚಿತ್ರಗಳನ್ನು ಜಲವರ್ಣದಲ್ಲಿ ರಚಿಸಿದ್ದಾರೆ. ಕನ್ನಡತನದ ಬಹುಮುಖಿ ಗುಣವನ್ನು ಹಿಡಿದಿರಿಸುವ ಸಲುವಾಗಿ, ಆ ಪರಿಕಲ್ಪನೆಗೆ ರೂಪು ರೇಷೆಯನ್ನು ನೀಡಿದ ಮಹಾನುಭಾವರ ಭಾವಚಿತ್ರಗಳಾಗಿವೆ. 1973ರಲ್ಲಿ ಮೈಸೂರು ರಾಜ್ಯವು ಕರ್ನಾಟಕವೆಂದು ಪುನರ್ ನಾಮಕರಣಗೊಂಡಾಗಿನಿಂದ, ನಮ್ಮಲ್ಲಿ ಕನ್ನಡತನವನ್ನು ಉದ್ದೀಪಿಸಿದ ಆಯ್ದ ವ್ಯಕ್ತಿತ್ವಗಳ ಚಿತ್ರಗಳಾಗಿವೆ. ಜಲವರ್ಣ ಭಾವಚಿತ್ರಗಳಲ್ಲಿರುವ ವ್ಯಕ್ತಿಗಳನ್ನು ಸುಲಭಕ್ಕೆ ಗುರ್ತಿಸಬಹುದು. ಜೊತೆಗೆ, ಮಾಧ್ಯಮದ ರಾಜಕಾರಣದಿಂದಲೋ ಅಥವಾ ಕನ್ನಡವನ್ನು ಕುರಿತಾಗಿ ಸಮಕಾಲೀನ ರಾಜಕಾರಣದ ಸಂಕುಚಿತತೆಯ ವಲಯದಿಂದ ಹೊರಗಿದ್ದೂ ಕನ್ನಡತನವನ್ನು ಸಂರಚಿಸಿದ ವ್ಯಕ್ತಿತಗಳು ಭಾಷೆಯನ್ನು ಒಂದು ವಿಶಾಲ ನೆಲೆಯಲ್ಲಿ ಸ್ಥಾಪಿಸಿದವರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.
ಚಿತ್ರಗಳಲ್ಲಿರುವ ವ್ಯಕ್ತಿತ್ವಗಳು ಜನಪ್ರಿಯ ಹಾಗೂ ಗಂಭೀರ ರಂಗದಿಂದ, ವಿದ್ವಾಂಸರು ಹಾಗೂ ಸಾಮಾನ್ಯರನ್ನೂ ಒಳಗೊಂಡಿದ್ದು, ಎಲ್ಲರನ್ನೂ ಒಂದೆಡೆ ಒಟ್ಟುಗೂಡಿಸಲಾಗಿದೆ. ಒಂದೇ ಅಳತೆಯವರಾದರೂ ಅವರೆಲ್ಲರೂ ವಿವಿಧ ವೈವಿಧ್ಯಮಯ ಆಯಾಮಗಳನ್ನು ಕನ್ನಡತನಕ್ಕೆ ಒದಗಿಸಿಕೊಟ್ಟಿದ್ದಾರೆ. ಕನ್ನಡ ಸಾಹಿತ್ಯದ ಅಧಿಕಾರದ ಮುಖೇನವೇ ತನ್ನನ್ನು ವ್ಯಾಖ್ಯಾನಿಸಿಕೊಳ್ಳುತ್ತಿದ್ದ ಕನ್ನಡಕ್ಕೆ ಅಳಿದುಳಿದವರ, ಮುಖ್ಯವಾಹಿನಿ ಕನ್ನಡದ ಹೊರಗಿನಿಂದಲೂ ಹಲವು ಕನ್ನಡಗಳನ್ನು ರೂಪಿಸಿಕೊಟ್ಟವರ ಚಿತ್ರಣಗಳಾಗಿವೆ. ಜನಪ್ರಿಯ ಗಾಯಕರಾದ ಪಿ.ಬಿ.ಶ್ರೀನಿವಾಸ್, ಬರಹಗಾರರಾದ ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಕಲಾವಿದ ಎಸ್.ಎಂ. ಪಂಡಿತ್, ಫೀಲ್ಡ್ ಮಾರ್ಶಲ್ ಕಾರ್ಯಪ್ಪ ಮುಂತಾದವರ ಮನೆ ಮಾತು ಕನ್ನಡವಲ್ಲದಿದ್ದರೂ ಸಹ ಅವರೆಲ್ಲರ ಕನ್ನಡದ ಕೊಡುಗೆಗಳು ಯಾವ ಮಾನದಂಡದಿಂದಲೂ ಕಮ್ಮಿಯಿಲ್ಲ. ಅವರೆಲ್ಲರೂ ಚಿತ್ರಪ್ರದರ್ಶನದಲ್ಲಿ ಸಿಗಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇಲ್ಲಿರುವ ಭಾವಚಿತ್ರಗಳು ಕೇವಲ ಕನ್ನಡವೆಂದರೇನೆಂದು ರೂಪಿಸಿದವರ ದೃಶ್ಯಗಳಾಗಿಲ್ಲ. ಅದರ ಅರ್ಥ ವ್ಯಾಪ್ತಿಯನ್ನು ವಿಸ್ತರಿಸಿದವರ ಚಿತ್ರಣವೂ ಹೌದಾಗಿದೆ. ಕ್ರಿಕೆಟ್ ಆಟಗಾರರು, ಸಂಗೀತಗಾರರು, ಸೈನ್ಯಾಧಿಕಾರಿಗಳು, ಪರಿಸರವಾದಿಗಳು, ವಿಮರ್ಶಕರು, ವಿದೂಷಕರು, ವಿದೂಷಿಗಳು, ರಾಜಕಾರಣಿಗಳು, ಐತಿಹಾಸಿಕ ಹಾಗೂ ಐತಿಹ್ಯದ ಪರಿಕಲ್ಪಿತ ವ್ಯಕ್ತಿತ್ವಗಳು ಇಲ್ಲಿಒಂದೆಡೆ, ಒಂದೇ ಮಾಧ್ಯಮದಲ್ಲಿ, ಆಕಾರ, ಅಳತೆಗಳಲ್ಲಿ ಒಡನಾಡಿಗಳಾಗಿದ್ದಾರೆ ಪ್ರದರ್ಶನದ ಮೂಲಕ. ಇದೇ ಸಂದರ್ಭದಲ್ಲಿ ಚಿತ್ರಗಳೆಲ್ಲವೂ ಜನಮನದಲ್ಲಿ ಆಳವಾಗಿ ಬೇರು ಬಿಟ್ಟಿರುವ ವ್ಯಕ್ತಿತ್ವಗಳ ರೂಪು ರೇಷೆಗಳೇ ಆಗಿವೆ. ಅವರು ಹೇಗೆ ಕಾಣುತ್ತಿದ್ದರು, ಹೇಗಿದ್ದಾರೆ ಎಂಬುದೆಲ್ಲವೂ ಇಲ್ಲಿ ವಿಧಿತವಾಗಿವೆ ಎಂದು ಅವರು ಬಣ್ಣಿಸಿದ್ದಾರೆ.
ಪ್ರದರ್ಶನದಲ್ಲಿ ಜನಪ್ರಿಯರಾದ ವ್ಯಕ್ತಿಗಳ ಉಬ್ಬರವಿದೆ. ಅದರಿಂದಾಗಿಯೇ ಕನ್ನಡತನವನ್ನು ಕುರಿತು ಇದೊಂದು ತೆರೆದ ಪಠ್ಯವಾಗಿಯೂ ಗೋಚರವಾಗಿತ್ತದೆ. ಕರ್ನಾಟಕ, ಕನ್ನಡ ಇತ್ಯಾದಿ ರಾಷ್ಟ್ರ ಪರಿಕಲ್ಪನೆಯ ಅಂಗಗಳೆಂಬ ಅಮೂರ್ತ ಭಾವತೀವ್ರತೆಯ ಸಾಮೂಹಿಕ ತನ್ನತನವನ್ನು ಪ್ರದರ್ಶನದಲ್ಲಿ ಹಿಡಿದಿರಿಸಲಾಗಿದ್ದು, ಮಿತವಾದ ಅರ್ಥದಲ್ಲಿ ಕನ್ನಡತನವನ್ನು ಅವಸರದಲ್ಲಿ ನಿರ್ಧರಿಸುವುದರ ವಿರುದ್ಧ, ವಿಶಾಲ ಮನೋಭಾವದ, ಕನ್ನಡತನದ ಕನ್ನಡಿಗರ ಅಸ್ಮಿತೆಯ ಚಿತ್ರಣವಾಗಿದೆ. ಆಸಕ್ತರು ವೀಕ್ಷಿಸಲು ನಾರಾಯಣ್ ಎಂ. ಜೋಶಿ ಅವರು ಕೋರಿದ್ದಾರೆ.