ಮರಗಳ ಸಂರಕ್ಷಣೆ ಮುಖ್ಯ:ವಂಕೆ

ಭಾಲ್ಕಿ :ಜು.1:ಪಟ್ಟಣದ ಅಗ್ನಿಶಾಮಕ ಠಾಣೆ ಸುತ್ತಮುತ್ತಲಿನ ಮುಖ್ಯರಸ್ತೆಗಳಲ್ಲಿ ವನಮಹೋತ್ಸವ ಅಂಗವಾಗಿ ಅರಣ್ಯ ಇಲಾಖೆಯವರು ಸಮರೋಪಾದಿಯಲ್ಲಿ ಹಮ್ಮಿಕೊಂಡ ಸಸಿ ನೆಡುವ ಕಾರ್ಯಕ್ರಮಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಬಸವರಾಜ ವಂಕೆ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು,ಅರಣ್ಯ,ಜೀವಿಶಾಸ್ತ್ರ ಪರಿಸರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಖಂಡ್ರೆ ಅವರ ನಿರ್ದೇಶನದಂತೆ ಅರಣ್ಯ ಇಲಾಖೆ,ಕಂದಾಯ ಇಲಾಖೆ,ಪುರಸಭೆ ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಅತ್ಯಂತ ಆಸಕ್ತಿಯಿಂದ ಸಸಿ ನೆಡುವ ಕಾರ್ಯಕ್ರಮದಲ್ಲಿ ತಲ್ಲೀನರಾಗಿದ್ದಾರೆ.ಜು.ಒಂದರಿಂದ ಏಳರವರೆಗೆ ವನಮಹೋತ್ಸವ ಸಪ್ತಾಹ ಆಚರಿಸಲಾಗುತ್ತಿದ್ದು,ಪ್ರಸ್ತುತ ಸಾಲಿನಲ್ಲಿ ಒಂದು ಕೋಟಿ ಸಸಿ ನೆಡುವ ಗುರಿ ಹೊಂದಲಾಗಿದೆ.ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಭಾಗದಲ್ಲಿ ಗುಂಡಿಗಳನ್ನು ತೊಡಿ ಗಿಡಗಳನ್ನು ನೆಡಲಾಗುತ್ತಿದೆ.ನೆಟ್ಟ ಸಸಿ ಉತ್ತಮ ರೀತಿಯಿಂದ ಬೆಳೆಯಬೇಕಾದರೆ ಅದರ ಸಂರಕ್ಷಣೆ ಮಾಡುವುದು ಅತ್ಯಂತ ಅವಶ್ಯಕವಾಗಿದೆ.ಬೆಳೆದ ಗಿಡ-ಮರಗಳಿಂದ ಪರಿಶುದ್ಧ ಗಾಳಿ ಪಡೆದು ಸದೃಢ ಶರೀರ ಕಾಪಾಡಿಕೊಂಡು,ಸ್ವಚ್ಚ,ಸುಂದರ ಮತ್ತು ಮಾಲಿನ್ಯರಹಿತ ಪರಿಸರ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಲಿಂಗಾಯತ ಸಮಾಜದ ಧುರೀಣ ಬಸವರಾಜ ಮರೆ,ಪ್ರಾಚಾರ್ಯ ಅಶೋಕ ರಾಜೋಳೆ,ಅರಣ್ಯ ಸಿಬ್ಬಂದಿ ಅಂಕುಶ ಸೇರಿದಂತೆ ಇತರರಿದ್ದರು.