ಮರಗಳನ್ನು ಕಡಿಯದಿರಲು ಒತ್ತಾಯ

filter: 0; fileterIntensity: 0.0; filterMask: 0; captureOrientation: 0; module: photo; hw-remosaic: false; touch: (-1.0, -1.0); modeInfo: HDR ; sceneMode: 2; cct_value: 5400; AI_Scene: (-1, -1); aec_lux: 125.0; aec_lux_index: 0; hist255: 0.0; hist252~255: 0.0; hist0~15: 0.0; motionLevel: 0; weatherinfo: null; temperature: 38;

ವಿಜಯಪುರ.ಮೇ೨೯: ಪಟ್ಟಣದ ಪುರಸಭೆ ಸರ್ಕಲ್ ನಿಂದ ಕೋಲಾರ ರಸ್ತೆಯ ವಿಜಯಪುರ ಗಡಿಯವರೆಗೂ ರಸ್ತೆ ಅಗಲೀಕರಣ ಕಾಮಗಾರಿ ಆರಂಭವಾಗಿದ್ದು, ರಸ್ತೆಯ ಇಕ್ಕೆಲುಗಳಲ್ಲಿ ಮಾರ್ನಾಲ್ಕು ದಶಕಗಳಿಂದ ಜನರಿಗೆ ನೆರಳು ಕೊಡುತ್ತಿದ್ದ ಮರಗಳನ್ನು ಕಡಿಯದೇ ಉಳಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆಯ ಮಧ್ಯಭಾಗದಿಂದ ೧೨ ಮೀಟರ್ ಅಗಲದ ವ್ಯಾಪ್ತಿಯಲ್ಲಿ ಅನಧಿಕೃತವಾಗಿದ್ದ ಕಟ್ಟಡಗಳನ್ನು ತೆರವುಗೊಳಿಸಿಕೊಳ್ಳುವಂತೆ ವ್ಯಾಪಾರಿಗಳಿಗೆ ಅಧಿಕಾರಿಗಳು ಗಡುವು ನೀಡಿದ್ದ ಹಿನ್ನೆಲೆಯಲ್ಲಿ ಈಗಾಗಲೇ ವ್ಯಾಪಾರಿಗಳು ತಮ್ಮ ಅಂಗಡಿಗಳ ಮುಂಭಾಗದಲ್ಲಿ ಒತ್ತುವರಿಯನ್ನು ತೆರವುಗೊಳಿಸಿದ್ದು, ರಸ್ತೆಯ ಇಕ್ಕೆಲುಗಳಲ್ಲಿನ ಮರಗಳನ್ನು ಕಟಾವು ಮಾಡುತ್ತಿದ್ದಾರೆ.
ರಸ್ತೆ ಅಗಲೀಕರಣದಿಂದ ಬೃಹದಾಕಾರವಾಗಿ ಬೆಳೆದು ನಿಂತಿದ್ದ ಮರಗಳಿಗೆ ಕೊಡಲಿ ಬೀಳುತ್ತಿದ್ದು, ಅರಳೀಕಟ್ಟೆಗಳಲ್ಲಿರುವ ಅರಳೀಮರಗಳು, ನಾಗರ ಕಲ್ಲುಗಳು, ಬೇವಿನ ಮರಗಳು ಕೂಡಾ ಬಲಿಯಾಗುತ್ತಿವೆ. ರಸ್ತೆಯ ಬದಿಯಲ್ಲಿದ್ದ ಮರಗಳು ನೆನಪು ಮಾತ್ರ ಎನ್ನುವಂತಾಗಿದ್ದು, ಮರಗಳು ಕಟಾವಾಗುತ್ತಿದ್ದರೂ ಅರಣ್ಯ ಇಲಾಖೆಯ ಅಧಿಕಾರಿಗಳು ಮಾತ್ರ, ಎಷ್ಟು ಮರಗಳು ತೆಗೆಯಬೇಕು ಎನ್ನುವ ಕುರಿತು ಇನ್ನೂ ತೀರ್ಮಾನವಾಗಿಲ್ಲ ಎನ್ನುತ್ತಿದ್ದಾರೆ. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ೫೬ ಮರಗಳು ತೆರವುಗೊಳಿಸಲು ಅನುಮತಿ ಪಡೆದಿದ್ದೇವೆ ಎನ್ನುತ್ತಿದ್ದಾರೆ ಎಂದು ಸ್ಥಳೀಯರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.
ಮರಗಳು ಉಳಿಸುವಂತೆ ಪರಿಸರ ಪ್ರೇಮಿಗಳ ಒತ್ತಾಯ: ರಸ್ತೆಯನ್ನು ಅಗಲೀಕರಣ ಮಾಡಬೇಕೆನ್ನುವ ಉದ್ದೇಶದಿಂದ ಸುಮಾರು ೫೬ ಮರಗಳನ್ನು ತೆರವುಗೊಳಿಸಲು ಮುಂದಾಗಿರುವುದಕ್ಕೆ ಪರಿಸರ ಪ್ರೇಮಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮರಗಿಡಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಸುವಂತೆ ಸರ್ಕಾರವೇ ಜಾಗೃತಿ ಮೂಡಿಸಿ, ಮತ್ತೊಂದು ಕಡೆ ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುವುದು ಸರಿಯಲ್ಲ. ಸಾವಿರಾರು ಪ್ರಾಣಿಗಳು, ಪಕ್ಷಿಗಳು ಮರಗಳಲ್ಲಿ ವಾಸ ಮಾಡುತ್ತಿವೆ. ಮರಗಳನ್ನು ಕಡಿಯುವುದರಿಂದ ಪ್ರಾಣಿ, ಪಕ್ಷಿಗಳಿಗೆ ತೊಂದರೆಯಾಗಲಿದೆ. ರಸ್ತೆಗೆ ಅಡ್ಡಿಯಾಗುವಂತಹ ಕೊಂಬೆಗಳನ್ನು ತೆರವುಗೊಳಿಸಿ, ಮರಗಳನ್ನು ಉಳಿಸಬೇಕು. ರಸ್ತೆ ಕಾಮಗಾರಿ ಮಾಡುವಾಗ ರಸ್ತೆಯ ಉದ್ದಕ್ಕೂ ಸಸಿಗಳನ್ನು ನೆಡಿಸಬೇಕು ಎಂದು ಪರಿಸರ ಪ್ರೇಮಿ ಸುದರ್ಶನ್, ಅನಿಲ್, ಹರ್ಷವರ್ಧನ್ ಒತ್ತಾಯಿಸಿದರು.