ಮಮತಾ ಸಂಪುಟದಿಂದ ಮತ್ತೋರ್ವ ಸಚಿವ ಹೊರಕ್ಕೆ

ಕೋಲ್ಕತಾ, ಜ.5-ತೃಣಮೂಲ ಕಾಂಗ್ರೆಸ್ ಶಾಸಕ ಹಾಗೂ ಸಚಿವ ಲಕ್ಷ್ಮೀ ರತನ್ ಶುಕ್ಲಾ ,ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪ.ಬಂಗಾಳ ಸರ್ಕಾರದ ಸಚಿವ ಸ್ಥಾನವನ್ನು ತ್ಯಜಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣಗೆ ಕೆಲವೇ ತಿಂಗಳು ಬಾಕಿ ಇರುವಾಗ ಮಮತಾ ಅವರಿಗೆ ಆಪ್ತರಾಗಿದ್ದ ಸುವೇಂದು ಅಧಿಕಾರಿ ಸಹಿತ ಹಲವು ತೃಣಮೂಲ ಕಾಂಗ್ರೆಸ್ ನಾಯಕರುಗಳು ಬಿಜೆಪಿಗೆ ಸೇರಿದ ಕೆಲವೇ ದಿನಗಳ ನಂತರ 39ರ ವಯಸ್ಸಿನ ಶುಕ್ಲಾ ರಾಜ್ಯ ಕ್ರೀಡಾಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಶುಕ್ಲಾ ಅವರು ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿಗೆ ಕಳುಹಿಸಿಕೊಟ್ಟಿದ್ದಾರೆ. ಒಂದು ಪ್ರತಿಯನ್ನು ರಾಜ್ಯಪಾಲ ಜಗದೀಪ್ ಧಂಖರ್ ಗೆ ಸಲ್ಲಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಂಗಾಳ ರಣಜಿ ತಂಡದ ಮಾಜಿ ನಾಯಕ ಶುಕ್ಲಾ ಅವರು ಹೌರ್ಹಾದ ಶಾಸಕರಾಗಿದ್ದಾರೆ.
ನಾನು ರಾಜಕೀಯದಿಂದ ನಿವೃತ್ತಿ ಪಡೆಯಲು ಬಯಸಿರುವುದಾಗಿ ಮಮತಾಗೆ ಬರೆದ ಪತ್ರದಲ್ಲಿ ಶುಕ್ಲಾ ತಿಳಿಸಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ.