ಮಮತಾ ಮುಂಬೈ ಪ್ರವಾಸ

ಮುಂಬೈ, ನ.೩೦- ಮುಂಬರುವ ಹಲವು ರಾಜ್ಯಗಳ ವಿಧಾನಸಭಾ ಚುನಾವಣೆ ಸೇರಿದಂತೆ ಲೋಕಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು ಈಗಾಗಲೇ ಟಿಎಂಸಿ ಹಲವು ರಣತಂತ್ರಗಳನ್ನು ಹೆಣೆದಿದ್ದು, ಇದರ ಭಾಗವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೂರು ದಿನಗಳ ಕಾಲ ತನ್ನ ಮುಂಬೈ ಪ್ರವಾಸ ಕೈಗೊಂಡಿದ್ದಾರೆ. ಈ ಮೂರು ದಿನಗಳಲ್ಲಿ ಮಮತಾ ಹಲವು ರಾಜಕೀಯ ನಾಯಕರನ್ನು ಭೇಟಿ ಮಾಡಿ, ಚರ್ಚೆ ನಡೆಸಲಿದ್ದಾರೆ.
ಮುಖ್ಯವಾಗಿ ಟಿಎಂಸಿಯನ್ನು (ತೃಣಮೂಲ ಕಾಂಗ್ರೆಸ್) ಪಶ್ಚಿಮ ಬಂಗಾಳದಿಂದ ಹೊರಗೆ ಕೂಡ ವಿಸ್ತರಿಸಲು ಹಾಗೂ ವಿರೋಧಪಕ್ಷಗಳನ್ನು ಒಂದೇ ವೇದಿಕೆಯಲ್ಲಿ ತರುವ ಸಲುವಾಗಿ ಮಮತಾ ಸತತ ಪ್ರಯತ್ನ ನಡೆಸುತ್ತಿದ್ದಾರೆ. ಇದರ ಭಾಗವಾಗಿ ಮುಂಬೈ ಪ್ರವಾಸ ಕೈಗೊಂಡಿದ್ದಾರೆ. ಇಂದಿನಿಂದ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಎನ್‌ಸಿಪಿ ಶರದ್ ಪವಾರ್ ಸೇರಿದಂತೆ ಹಲವು ರಾಜಕೀಯ ನಾಯಕರ ಜೊತೆ ಮಮತಾ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ. ಅದೂ ಅಲ್ಲದೆ ಪಶ್ಚಿಮ ಬಂಗಾಳದಲ್ಲಿ ಆರ್ಥಿಕ ಚಟುವಟಿಕೆ ಹಾಗೂ ಕೈಗಾರಿಕೆಗಳನ್ನು ಚುರುಕುಗೊಳಿಸಲು ಕೂಡ ಮುಂಬೈನಲ್ಲಿ ಹಲವು ಉದ್ಯಮಿಗಳನ್ನು ಕೂಡ ಮಮತಾ ಭೇಟಿ ಮಾಡಿ, ತನ್ನ ರಾಜ್ಯಕ್ಕೆ ಆಹ್ವಾನಿಸಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್ ಜೊತೆ ಹಿಂದಿನಿಂದಲೂ ವೈರತ್ವ ಬೆಳೆಸಿಕೊಂಡು ಬಂದಿರುವ ಟಿಎಂಸಿ ಇದೀಗ ಕಾಂಗ್ರೆಸ್ಸೇತರ ಪಕ್ಷಗಳ ಜೊತೆ ಹೆಚ್ಚಿನ ಗೆಳೆತನ ಮುಂದುವರೆಸುವ ಯೋಜನೆ ಹಾಕಿಕೊಂಡಿದ್ದಾರೆ ಎನ್ನಲಾಗಿದೆ.