ಮಮತಾ ಗುಡೂರಿಗೆ ನುಡಿನಮನ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜು.06: ನಗರದ ಅಭಿನಯ ಕಲಾಕೇಂದ್ರದಿಂದ ನಿನ್ನೆ ಸಂಜೆ   ಹಿರಿಯ ರಂಗಭೂಮಿ ಕಲಾವಿದೆ ಮಮತಾ ಗುಡೂರು ಇವರಿಗೆ ಇಲ್ಲಿನ ಡಿ.ಆರ್. ಕೆ. ರಂಗಸಿರಿ ಭವನದಲ್ಲಿ ನುಡಿನಮನ ಸಲ್ಲಿಸಲಾಯಿತು.
ಕಲಾವಿದೆ ಲತಾ ಕಾರವಾರ, ಬಾವಳ್ಳಿ ರೇಣುಕಾ ಅವರು ಗೂಡೂರವರ ಭಾವಚಿತ್ರಕ್ಕೆ  ಪುಷ್ಪಾರ್ಚನೆ ಮಾಡುವುದರ ಮೂಲಕ ಆರಂಭವಾದ ಕಾರ್ಯಕ್ರಮದಲ್ಲಿ ಹಿರಿಯ ನಟ ಡಾ.ಗಾದಿಲಿಂಗನಗೌಡ,  ಮಮತಾ ಗೂಡೂರುಬಅವರ ವಿಶಿಷ್ಟ ಅಭಿನಯ, ಚತುರತೆಯ ಬಗ್ಗೆ ಮಾತನಾಡಿದರು.
ಪ್ರೊ.ಚಂದ್ರಶೇಖರ ಮತ್ತು ಗೋಟೂರು ಚಂದ್ರಶೇಖರರವರು ಮಮತಾರೊಂದಿಗೆ ಅಭಿನಯಿಸಿದ ನೆನಪುಗಳನ್ನು ಮೆಲುಕು ಹಾಕಿ ಭಾವುಕರಾದರು. ರಂಗ ನಿರ್ದೇಶಕ ಕೆ.ಜಗದೀಶ್ ಮಾತನಾಡಿ, ಮುಮ್ತಾಜ್ ಎಂಬ ಹೆಸರನ್ನು ಮಮತಾ ಗುಡೂರು ಎಂದು ಬದಲಾಯಿಸಿಕೊಂಡು ಉತ್ತರ ಕರ್ನಾಟಕದಲ್ಲಿ ಕೋಟ್ಯಂತರ ಅಭಿಮಾನಿಗಳ ಅಭಿಮಾನಕ್ಕೆ ಪಾತ್ರರಾದ ಬಗ್ಗೆ ಶ್ಲಾಘಿಸಿದರು. ಮಮತಾ ಅವರ ಅಕ್ಕ ಫಾತಿಮಾರವರು ಪ್ರಮೀಳಾ ಗುಡೂರು ಹೆಸರಿನಲ್ಲಿ ಸಾಮಾಜಿಕ ನಾಟಕಗಳಿಗೆ ಜೀವ ತುಂಬಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಅಮರೇಶ, ಶಿವರುದ್ರಯ್ಯ, ನಾಗಭೂಷಣ , ನೇತಿ ರಘುರಾಮ, ಪ್ರೊ. ಮಂಜುನಾಥ, ಅವಿನಾಶ್, ಸಂತೋಷಗೌಡ, ತರುಣ, ಸಂದೇಶ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ  ರಾಘವೇಂದ್ರ ಗುಡದೂರು, ಮುದ್ದಟನೂರು ತಿಪ್ಪೇಸ್ವಾಮಿ, ಖಾಸಿಂ ಅಲಿ, ಜಡೇಶ, ತಿಪ್ಪೆರುದ್ರಪ್ಪ, ಕೊಂಚಿಗೇರಿ ವೀರನಗೌಡ, ಎರಿಗೌಡ ಕೆ . ಜಗದೀಶ್ ಹಾಡಿದರು. ಯೋಗೀಶ್ ತಬಲಾ  ಸಾಥ್ ನೀಡಿದರು. ವಿಷ್ಣು ಹಡಪದ ಕಾರ್ಯಕ್ರಮ ನಿರೂಪಿಸಿದರು. ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಸಹಕಾರ ನೀಡಿತ್ತು.