ಮಮತಾಗೆ ಹ್ಯಾಟ್ರಿಕ್ ಗೆಲುವು ಬಿಜೆಪಿ ಕನಸು ಭಗ್ನ

ಕೊಲ್ಕತ್ತಾ,ಮೇ.೨- ತೀವ್ರ ಜಿದ್ದಾಜಿದ್ದಿ ಮತ್ತು ಹಣಾಹಣಿ ,ಹಿಂಸಾಚಾರದಿಂದ ಕೂಡಿದ್ದ ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಮತದಾರ ಪ್ರಭು ,ದೀದಿಗೆ ಜೈ ಎಂದಿದ್ದು ಸತತ ಮೂರನೇ ಬಾರಿಗೆ ಹ್ಯಾಟ್ರಿಕ್ ಗೆಲುವು ಖಚಿತವಾಗಿದೆ.

ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷ ೨೦೩ಕ್ಕೂ ಕ್ಷೇತ್ರಗಳಲ್ಲಿ ಮುನ್ನೆಡೆ ಗಳಿಸಿ ಅಭೂತಪೂರ್ವ ಗೆಲುವು ದಾಖಲಿಸುವ ಹೆಜ್ಜೆ ಇಟ್ಟಿದೆ.ಟಿಎಂಸಿಯನ್ನು ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿ ಮಾಡಿದ ಎಲ್ಲಾ ತಂತ್ರಗಳು ಕೈಗೂಡದೆ ಕಮಲ ಮುದುಡಿಕೊಂಡಿದೆ. ಈ ಮೂಲಕ ಟಿಎಂಸಿಮೂರನೇ ಬಾರಿಗೆ ಅಧಿಕಾರ ಹಿಡಿಯುವತ್ತ ಹೆಜ್ಜೆ ಇಟ್ಟಿದೆ.

ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕು ಲೆಕ್ಕಿಸದೆ ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಶತಾಯ ಗತಾಯ ಅಧಿಕಾರ ಹಿಡಿಯಬೇಕು ಎನ್ನುವ ಹಠಕಕ್ಕೆ ಬಿದ್ದಿದ್ದ ಬಿಜೆಪಿಯ ಕನಸು ಭಗ್ನವಾಗಿದೆ. ಮತದಾರ ಈ ಮೂಲಕ ಬಿಜೆಪಿಗೆ ತಕ್ಕ ಪಾಠ ಕಲಿಸಿದ್ದಾನೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯನ್ನು ಕೊರೋನಾ ಸೋಂಕಿನ ನಡುವೆಯೂ ಬಿಜೆಪಿ ೮ ಹಂತಗಳಲ್ಲಿ ನಡೆಸುವಲ್ಲಿ ಯಶಸ್ವಿಯಾಗಿತ್ತು. ಆದರೂ ಅದರ ತಂತ್ರ-ಪ್ರತಿತಂತ್ರ ಪಶ್ಚಿಮಬಂಗಾಳ ಜನರ ಮುಂದೆ ನಡೆದಿಲ್ಲ. ಇದುವರೆಗಿನ ಮುನ್ನಡೆಯಲ್ಲಿ ಟಿಎಂಸಿ ಪಕ್ಷ ಸ್ಪಷ್ಟ ಬಹುಮತ ಗಳಿಸುವತ್ತ ದಾಪುಗಾಲಿಟ್ಟಿದೆ.

ಪ್ರಧಾನಿ ಪ್ರತಿಷ್ಠೆಗೆ ಹೊಡೆತ

ಪ್ರಧಾನಿ ನರೇಂದ್ರ ಮೋದಿ ಕೇಂದ್ರ ಗೃಹಸಚಿವ ಅಮಿತ್ ಶಾ ಸೇರಿದಂತೆ ಬಿಜೆಪಿಯ ಘಟಾನುಘಟಿ ನಾಯಕರು ಪಶ್ಚಿಮಬಂಗಾಳ ವಿಧಾನಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದರು. ಅದಕ್ಕೆ ರಾಜ್ಯದ ಜನ ಮುಟ್ಟಿ ನೋಡಿಕೊಳ್ಳುವಂತೆ ತಿರುಗೇಟು ನೀಡಿದ್ದಾರೆ

ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಸಂಖ್ಯೆ ವ್ಯಾಪಕವಾಗಿ ಹರಡುತ್ತಿದ್ದರೂ ಆ ಕಡೆ ಗಮನ ಕೊಡದೆ ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಸಾವಿರಾರು ಜನರನ್ನು ಸೇರಿಸಿ ರಾಜ್ಯದಲ್ಲಿ ಸೋಂಕು ಹೆಚ್ಚಳಕ್ಕೆ ಕಾರಣವಾಗುವ ಮೂಲಕ ಬಿಜೆಪಿ ಕಡೆ ಮತದಾರರನ್ನು ಸೆಳೆಯುವ ಬಿಜೆಪಿ ಪ್ರಯತ್ನ ವಿಫಲವಾಗಿದೆ.

೨೯೪ ವಿಧಾನಸಭಾ ಕ್ಷೇತ್ರಗಳ ಪೈಕಿ ಅಧಿಕಾರ ಹಿಡಿಯಲು ಅಗತ್ಯವಿರುವ ೧೧೮ ಸಂಖ್ಯೆಯನ್ನು ದಾಟಿ ಟಿಎಂಸಿ ಮೈತ್ರಿಕೂಟ ೨೦೩ ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಬಿಜೆಪಿ ಪಕ್ಷ ೮೬ ಸ್ಥಾನಗಳಲ್ಲಿ ಮುನ್ನಡೆ ಗಳಿಸಿದೆ.

ಕಾಂಗ್ರೆಸ್ ಎಡ ಪಕ್ಷಗಳ ಮೈತ್ರಿಕೂಟ ೧ ಯಾವುದೇ ಕ್ಷೇತ್ರ. ಇತರರು ೨ ಕ್ಷೇತ್ರಗಳಲ್ಲಿ ಮುನ್ನೆಡೆಗಳಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ನೇರ ಹಣಾಹಣಿ ನಡೆದಿದೆ ಹೀಗಾಗಿ ಈ ಎರಡು ಪಕ್ಷಗಳ ಸ್ಪರ್ಧೆ ಆಟಕ್ಕುಂಟು ಲೆಕ್ಕಕ್ಕೆ ಇಲ್ಲ ಎನ್ನುವಂತಾಗಿದೆ.ಸ್ಪರ್ಧೆ ಪ್ರತಿ ಸ್ಪರ್ಧೆಯಲ್ಲಿ ಕೊನೆಗೂ ಟಿಎಂಸಿ ಪಕ್ಷ ಅಧಿಕಾರ ಹಿಡಿಯುವತ್ತ ಹೆಜ್ಜೆ ಇಟ್ಟಿದೆ

ಈ ಬಾರಿ ಪಶ್ಚಿಮ ಬಂಗಾಲದಲ್ಲಿ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತಂದರೆ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತಡ ಕೇಂದ್ರದ ಬಿಜೆಪಿ ಹಿರಿಯ ನಾಯಕರು ಜನರಿಗೆ ಭರವಸೆ ನೀಡಿದ್ದರು. ಪ್ರಧಾನಿಯ ಭರವಸೆಗಳಿಗೆ ಮನ್ನಣೆ ನೀಡದ ಮತದಾರ ಟಿಎಂಸಿ ನೇತೃತ್ವದ ಪಕ್ಷ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳಿಗೆ ಜೈ ಎಂದಿದ್ದಾರೆ