ಮಮತಾಗೆ ಆಯೋಗದಿಂದ ಮತ್ತೊಂದು ನೋಟಿಸ್

ನವದೆಹಲಿ, ಏ.೧೦: ಕೇಂದ್ರೀಯ ಪಡೆಗಳ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೀಡಿದ್ದರೆನ್ನಲಾದ ಹೇಳಿಕೆಗಳ ವಿರುದ್ಧ ಕೇಂದ್ರ ಚುನಾವಣಾ ಆಯೋಗ ಅವರಿಗೆ ಎರಡು ದಿನಗಳಲ್ಲಿ ಎರಡನೇ ನೋಟಿಸ್ ಜಾರಿ ಮಾಡಿದೆ.
ಮಮತಾ ಬ್ಯಾನರ್ಜಿಯವರು ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ಅವರು ಭಾರತೀಯ ದಂಡ ಸಂಹಿತೆಯ ಹಲವು ಸೆಕ್ಷನ್‌ಗಳು ಮತ್ತು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ಆಯೋಗವು ಆರೋಪಿಸಿದ್ದು, ನೋಟಿಸ್‌ಗೆ ಉತ್ತರಿಸುವಂತೆ ಎಂದು ಸೂಚಿಸಲಾಗಿದೆ.
“ ಮಮತಾ ಬ್ಯಾನರ್ಜಿ ಅವರ ಹೇಳಿಕೆಯು ಸಂಪೂರ್ಣ ಸುಳ್ಳು, ಪ್ರಚೋದನಕಾರಿ ಮತ್ತು ಅತಿರೇಕದ್ದು ಎಂದು ಮೇಲ್ನೋಟಕ್ಕೇ ಕಾಣಿಸುತ್ತದೆ. ಚುನಾವಣಾ ಪ್ರಕ್ರಿಯೆಯ ನಡುವೆ ಕೇಂದ್ರ ಅರೆಸೇನಾ ಪಡೆಗೆ ಛೀಮಾರಿ ಹಾಕಿ ಅಪಮಾನಿಸುವುದು, ಸಿಬ್ಬಂದಿಯ ನೈತಿಕ ಸ್ಥೈರ್ಯವನ್ನೇ ಕುಗ್ಗಿಸುತ್ತದೆ ”ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
ಕಳೆದ ಕೆಲವು ದಿನಗಳಲ್ಲಿ ಮಮತಾ ಅವರಿಗೆ ಸಿಕ್ಕ ಎರಡನೇ ನೋಟಿಸ್ ಇದು. ಕೋಮು ಆಧಾರದಲ್ಲಿ ಮತದಾರರಿಗೆ ಮನವಿ ಮಾಡಿದ ಆರೋಪದಲ್ಲಿ ಮಮತಾ ಅವರಿಗೆ ಬುಧವಾರವೂ ಆಯೋಗವು ನೋಟಿಸ್ ನೀಡಿತ್ತು.

‘ಶೋಕಾಸ್ ನೋಟಿಸ್ ಲೆಕ್ಕಕ್ಕಿಲ್ಲ’
ಜಮಾಲ್‌ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಆಯೋಗದ ನೋಟಿಸ್‌ಗೆ ಪ್ರತಿಕ್ರಿಯಿಸಿರುವ ಮಮತಾ ಬ್ಯಾನರ್ಜಿ ಬಿಜೆಪಿ ಹೇಳಿದಂತೆ ಕೇಳುವುದನ್ನು ನಿಲ್ಲಿಸುವವರೆಗೆ ಸಿಆರ್‌ಪಿಎಫ್ ವಿರುದ್ಧ ಮಾತನಾಡುವುದನ್ನು ನಿಲ್ಲಿಸುವುದಿಲ್ಲ.

ಚುನಾವಣಾ ಆಯೋಗವೇ ಬಿಜೆಪಿಯ ಕುಮ್ಮಕ್ಕಿನಂತೆ ಕೆಲಸ ಮಾಡುತ್ತಿದೆ. ಬಿಜೆಪಿ ಹೇಳಿದಂತೆ ಕೇಳುವುದನ್ನು ನಿಲ್ಲಿಸುವವರೆಗೆ ಸಿಆರ್‌ಪಿಎಫ್ ಹಸ್ತಕ್ಷೇಪದ ಬಗ್ಗೆ ಮಾತನಾಡುವೆ. ಬಿಜೆಪಿ ಹೇಳಿದಂತೆ ಕೇಳುವುದನ್ನು ನಿಲ್ಲಿಸಿದ ದಿನ ಅವರಿಗೆ ಸೆಲ್ಯೂಟ್ ಕೊಡುವೆ. ಚುನಾವಣಾ ಆಯೋಗದ ಶೋಕಾಸ್ ನೋಟಿಸ್ ನನಗೆ ಲೆಕ್ಕಕ್ಕೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.