ಮನ ಪರಿವರ್ತನೆಯ ಕಾರ್ಯ ಮಾಡೋಣ: ಟಿ.ಎಸ್.ನಾಗಾಭರಣ

ಬೀದರ ಜ. 05: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಟಿ.ಎಸ್.ನಾಗಾಭರಣ ಅವರು ಪೂಜ್ಯ ಶ್ರೀ ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಜನವರಿ 4ರಂದು ಕನ್ನಡ ಜಾಗೃತ ಸಮಿತಿ ಸದಸ್ಯರ ಮತ್ತು ಬೀದರ್ ಜಿಲ್ಲೆಯ ಕನ್ನಡಪರ ಸಂಘಟನೆಗಳ, ಹೋರಾಟಗಾರರ ಮತ್ತು ಸಾಹಿತಿಗಳು, ಚಿಂತಕರು ಬುದ್ಧಿಜೀವಿಗಳೊಂದಿಗೆ ಸಭೆ ನಡೆಸಿದರು.
ಒಂದು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿದ ಅಧ್ಯಕ್ಷರು, ಬೀದರ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದ ಸಮಸ್ಯೆಗಳಿಗೆ ಹೇಗೆ ಪರಿಹಾರ ಕಂಡುಕೊಳ್ಳಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲಹೆಗಳನ್ನು ನೀಡಬೇಕು ಎಂದು ಸಭೆಯಲ್ಲಿದ್ದ ಕನ್ನಡಪರ ಸಂಘಟನೆಗಳ, ಹೋರಾಟಗಾರರ ಮತ್ತು ಸಾಹಿತಿಗಳು, ಚಿಂತಕರು ಬುದ್ಧಿಜೀವಿಗಳಲ್ಲಿ ಕೋರಿದರು.
ಈ ವೇಳೆ ಹಿರಿಯ ಜಾನಪದ ವಿದ್ವಾಂಸರಾದ ಡಾ.ಜಗನ್ನಾಥ ಹೆಬ್ಬಾಳೆ ಅವರು ಮಾತನಾಡಿ, ಜಾನಪದ ವಿಶ್ವಕೋಶ ಪ್ರಕಟಿಸಬೇಕು. ಬೀದರದಂತಹ ಗಡಿ ಜಿಲ್ಲೆಯಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕನ್ನಡ ಅಭ್ಯಾಸ ಮಾಡುವವರಿಗೆ 2,000 ಪೆÇ್ರೀತ್ಸಾಹ ಧನ ನೀಡಬೇಕು. ಜಿಲ್ಲೆಯಲ್ಲಿನ ಕನ್ನಡ ಶಾಲೆಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸಬೇಕು ಎಂದು ಸಲಹೆ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಸುರೇಶ ಚನಶೆಟ್ಟಿ ಅವರು ಮಾತನಾಡಿ, ಬೀದರನಲ್ಲಿ ಮರಾಠಿ ಮತ್ತು ಉರ್ದು ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಕಲಿಸುವ ಶಿಕ್ಷಕರ ಕೊರತೆ ಇದ್ದು, ಅಗತ್ಯಕ್ಕನುಸಾರ ಕನ್ನಡ ಭಾಷಾ ಶಿಕ್ಷಕರ ನೇಮಕವಾಗಬೇಕು. ಎಲ್ಲಾ ಅಂಗಡಿಗಳಲ್ಲಿ ಕನ್ನಡದಲ್ಲಿಯೇ ನಾಮಫಲಕ ಇರುವಂತಾಗಬೇಕು ಎಂದು ಸಲಹೆ ಮಾಡಿದರು.
ಈ ವೇಳೆ ಸಾಹಿತಿ ಸಂಜೀವಕುಮಾರ್ ಅತಿವಾಳೆ ಅವರು ಮಾತನಾಡಿ, ಕನ್ನಡ ಕಾರ್ಯಕ್ರಮಗಳು ಬರಿ ಬೆಂಗಳೂರಿಗೆ ಸೀಮಿತವಾಗದಿರಲಿ. ಬೀದರದಂತಹ ಗಡಿ ಜಿಲ್ಲೆಗಳಲ್ಲಿ ಕನ್ನಡ ಕಾರ್ಯಕ್ರಮಗಳು ಹೆಚ್ಚಿನ ರೀತಿಯಲ್ಲಿ ನಡೆಯಲು ಅವಕಾಶ ನೀಡಬೇಕು ಎಂದು ಸಲಹೆ ಮಾಡಿದರು.
ಪತ್ರಕರ್ತರಾದ ವಿರೂಪಾಕ್ಷ ಗಾದಗಿ ಅವರು ಮಾತನಾಡಿ, ಅಧೀನ ನ್ಯಾಯಾಲಯಗಳಲ್ಲಿ ಹೊರಡಿಸುವ ಆದೇಶಗಳು, ಸುತ್ತೋಲೆಗಳು ಕನ್ನಡ ಭಾಷೆಯಲ್ಲಿ ಇರಬೇಕು ಎಂದು ತಿಳಿಸಿದರು.
ಬಳಿಕ ಮಾತನಾಡಿದ ಟಿ.ಎಸ್.ನಾಗಾಭರಣ ಅವರು, ಕನ್ನಡವನ್ನು ಬಲಪಡಿಸಲು ಒತ್ತು ಕೊಡಲಾಗುವುದು. ಇದಕ್ಕೆ ಪೂರಕವಾದ ಎಲ್ಲ ಕಾರ್ಯಗಳನ್ನು ನಡೆಸಲಾಗುವುದು. ನಾವು ಕನ್ನಡವನ್ನು ಗೌರವ ಪ್ರೀತಿಯಿಂದ ಕಾಪಾಡಬೇಕು. ಸಮಸ್ಯೆಗಳಿಗೆ ಉತ್ತರ ಕಂಡುಕೊಳ್ಳೋಣ. ಗಡಿಯಲ್ಲಿ ಬರೀ ಶಿಕ್ಷಕರನ್ನು ನೇಮಿಸಿದರಷ್ಟೇ ಸಮಸ್ಯೆ ಪರಿಹಾರವಾಗದು. ಮೂಲ ತೊಂದರೆಯನ್ನು ಹೇಗೆ ನಿವಾರಿಸಬಹುದು ಎಂಬುದರ ಬಗ್ಗೆ ಯೋಚಿಸೋಣ. ಮನ ಪರಿವರ್ತನೆ ಕೆಲಸ ಮಾಡೋಣ. ಕೇವಲ ಕಾನೂನು ಆದೇಶ, ಸುತ್ತೋಲೆಗಳಿಂದ ಕನ್ನಡ ಕಟ್ಟಲು ಆಗುವುದಿಲ್ಲ ಎಂಬುದು ನಮಗೀಗ ಅರಿವಿಗೆ ಬಂದಿದೆ. ಕನ್ನಡವನ್ನು ಕಟ್ಟುವ ಬದ್ದತೆಯ ಮನಸುಗಳಿದ್ದಾಗ ಕನ್ನಡ ಕಟ್ಟಲು ಸಾಧ್ಯವಾಗಲಿದೆ ಎಂದರು.
ಸಣ್ಣ ಸಣ್ಣ ಚಟುವಟಿಕೆಗಳಿಂದ ಮನಸುಗಳನ್ನು ಪರಿವರ್ತನೆ ಮಾಡುವ ಕೆಲಸವಾಗಬೇಕು. ಕನ್ನಡ ಕಲಿಕಾ ಕೇಂದ್ರಗಳನ್ನು ಹೆಚ್ಚು ಹೆಚ್ಚು ಮಾಡಿದಲ್ಲಿ ಕನ್ನಡ ಬೆಳೆಯಲು ಸಾಧ್ಯವಿದೆ ಎಂದು ತಿಳಿಸಿದರು. ಸಾಹಿತ್ಯ ಮತ್ತು ಸಂಸ್ಕøತಿಯನ್ನು ಸತತವಾಗಿ ಕಟ್ಟುವ ಕೆಲಸ ಆಗಬೇಕು ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಮುರಳೀಧರ ಅವರು ಪ್ರಾಸ್ತಾವಿಕ ಮಾತನಾಡಿದರು.
ಸಭೆಯಲ್ಲಿ ಪ್ರೊ.ಎಸ್.ವಿ.ಕಲ್ಮಠ, ರಂಗಕರ್ಮಿ ಶಂಭುಲಿಂಗ ವಾಲದೊಡ್ಡಿ, ಕನ್ನಡಪರ ಸಂಘಟನೆಗಳ ರಾಜಕುಮಾರ ಹೆಬ್ಬಾಳೆ, ಸಂತೋಷ ಜೋಳದಾಪಕೆ ಅವರು ಕೂಡ ಹಲವಾರು ಸಲಹೆಗಳನ್ನು ನೀಡಿದರು.
ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸುರೇಶ ಬಡಿಗೇರ, ಸಾಹಿತಿಗಳಾದ ರಮೇಶ ಬಿರಾದಾರ, ಕನ್ನಡ ಜಾಗೃತಿ ಸಮಿತಿಯ ಸದಸ್ಯರಾದ ವಿಜಯಕುಮಾರ ಸೋನಾರೆ, ಎಂ.ಪಿ.ಮುದಾಳೆ, ಕನ್ನಡಪರ ಸಂಘಟನೆಗಳ ಶ್ಯಾಮರಾವ್ ನೆಲವಾಡೆ ಹಾಗೂ ಇನ್ನೀತರರು ಇದ್ದರು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಸಿದ್ರಾಮ ಸಿಂಧೆ ಅವರು ಸ್ವಾಗತಿಸಿದರು.