ಮನ್ಸಲಾಪೂರು ಕೈಗಾರಿಕಾ ಕೇಂದ್ರಗಳಿಗೆ ನಗರದ ಕುಡಿವ ನೀರು ಪೂರೈಕೆ ಪೈಪ್ ಲೈನ್

ಅಕ್ರಮ ಕಾಮಗಾರಿ ತಡೆಯುವಲ್ಲಿ ನಗರಸಭೆ – ಜಿಲ್ಲಾಡಳಿತ ವಿಫಲ
ರಾಯಚೂರು.ಏ.೨೭- ನಗರ ಕುಡಿವ ನೀರು ಮುಖ್ಯ ಪೈಪ್ ಲೈನ್ ಮೂಲಕ ಮನ್ಸಲಾಪೂರು ಕೈಗಾರಿಕಾ ಘಟಕಗಳಿಗೆ ನೀರು ಪೂರೈಸುವ ಪೈಪ್ ಲೈನ್ ಕಾಮಗಾರಿ ರಾಜಾರೋಷವಾಗಿ ನಡೆಯುತ್ತಿದೆ.
ಈ ಕುರಿತು ಪೌರಾಯುಕ್ತರಾದ ವೆಂಕಟೇಶ ಅವರನ್ನು ನಿನ್ನೆ ಸಂಪರ್ಕಿಸಿದಾಗ ಉದ್ದೇಶಿತ ಪೈಪ್ ಲೈನ್ ಕಾಮಗಾರಿ ಯಾವ ಅನುದಾನದಡಿ ಕೈಗೊಳ್ಳಲಾಗಿದೆ. ಎಂದೂ ಟೆಂಡರ್ ಪ್ರಕ್ರಿಯೆ ನಡೆಸಲಾಗಿದೆ ಎನ್ನುವುದೇ ಗೊತ್ತಿಲ್ಲ. ಈ ಕಾಮಗಾರಿ ಬಗ್ಗೆ ನನ್ನ ಗಮನಕ್ಕಿಲ್ಲ. ನಾನು ಕಿರಿಯ ಅಭಿಯಂತರರಿಗೆ ನೋಟೀಸ್ ನೀಡಿ, ಕೂಡಲೇ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಸೂಚಿಸುವುದಾಗಿ ಹೇಳಿದರು. ಮತ್ತೊಂದು ಕಡೆ ಈ ಪೈಪ್ ಲೈನ್‌ಗೆ ಸಂಬಂಧಿಸಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಬಷೀರುದ್ದೀನ್ ಅವರು, ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದಾರೆ.
ಮನ್ಸಲಾಪೂರು ರಸ್ತೆಯಲ್ಲಿರುವ ಕೈಗಾರಿಕಾ ಕೇಂದ್ರಗಳಿಗೆ ಅನಧಿಕೃತವಾಗಿ ೬ ಇಂಚಿನ ಕುಡಿವ ನೀರಿನ ಪೈಪ್ ಲೈನ್ ಅಳವಡಿಸಲಾಗುತ್ತಿದೆ. ನಿಯಮ ಬಾಹೀರವಾಗಿ ಈ ಕಾಮಗಾರಿ ಕೈಗೊಳ್ಳಲಾಗಿದೆ. ಬೇಸಿಗೆಯಲ್ಲಿ ನಾಗರೀಕರು ಕುಡಿವ ನೀರಿನ ಗಂಭೀರ ಸಮಸ್ಯೆ ಎದುರಿಸುತ್ತಾರೆ. ಆದರೆ, ಬೇಸಿಗೆ ಸಂದರ್ಭದಲ್ಲಿಯೇ ಕೈಗಾರಿಕಾ ಘಟಕಗಳಿಗೆ ೬ ಇಂಚು ಪೈಪ್ ಮೂಲಕ ನೀರು ಪೂರೈಕೆಗೆ ಕಾಮಗಾರಿ ನಡೆದಿದೆ. ಉದ್ದೇಶಿತ ಕಾಮಗಾರಿ ಯಾವ ಅನುದಾನದಲ್ಲಿ ಕೈಗೊಳ್ಳಲಾಗುತ್ತಿದೆ. ಯಾವ ಸಾಮಾನ್ಯ ಸಭೆಯಲ್ಲಿ ಅನುಮೋದಿಸಲ್ಪಟ್ಟಿದೆ. ಮತ್ತು ಟೆಂಡರ್ ಪ್ರಕ್ರಿಯೆ ನಡೆದ ಮಾಹಿತಿ ನೀಡುವಂತೆ ಕೋರಿದ್ದಾರೆ.
ಕನಿಷ್ಟ ನಿಯಮಗಳನ್ನು ಗಾಳಿಗೆದೂರಿ ಉದ್ದೇಶಿತ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ತಕ್ಷಣವೇ ಅಧಿಕಾರಿಗಳಿಗೆ ಮತ್ತು ಗುತ್ತೇದಾರರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರಸಭೆಯಲ್ಲಿ ಯಾರಾದರೂ, ಏನಾದರೂ ತಮ್ಮ ಇಚ್ಛೆಗನುಗುವಾಗಿ ಕೆಲಸ ನಡೆಸಬಹುದೇ?. ಈ ಬಗ್ಗೆ ನಗರಸಭೆ ಸದಸ್ಯರ ಮೌನ ಅನೇಕ ಗುಮಾನಿಗಳಿಗೆ ಕಾರಣವಾಗಿದೆ. ಕುಡಿವ ನೀರಿಗೆ ಸಂಬಂಧಿಸಿ, ಜಿಲ್ಲಾಧಿಕಾರಿ, ನಗರಸಭೆ ಗಮನ ಹರಿಸಬೇಕಾಗಿದೆ. ಈ ರೀತಿ ಕೈಗಾರಿಕಾ ಘಟಕಗಳಿಗೆ ಯಾವುದೇ ಅನುಮೋದನೆ ಇಲ್ಲದೇ, ಏಕಾಏಕಿ ೬ ಇಂಚು ಪೈಪ್ ಮೂಲಕ ನೀರು ಒದಗಿಸುವುದು ಸರಾಸರಿ ನಿಯಮ ಬಾಹೀರವಾಗಿದೆ. ಕಾರಣ ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ.
ಏ.೨೬ ರಂದು ಈ ದೂರು ನೀಡಿದ್ದರೂ, ಇಲ್ಲಿವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ರಾಜಾರೋಷವಾಗಿ ಪೈಪ್ ಲೈನ್ ಹಾಕುವ ಕಾಮಗಾರಿ ನಡೆಯುತ್ತಿದೆ. ನಗರಸಭೆಯಲ್ಲಿ ಕಾನೂನು ನಿಯಮಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರೂ, ಇದನ್ನು ತಡೆಯುವ ಪ್ರಯತ್ನ ನಡೆಯುತ್ತಿಲ್ಲ. ಉದ್ದೇಶಿತ ಕಾಮಗಾರಿ ಭಾರೀ ಅವ್ಯವಹಾರದಿಂದ ಕೂಡಿದೆಂಬ ಶಂಕೆಗೆ ದಾರಿ ಮಾಡಿದೆ. ಈ ಭಾಗದ ಕೈಗಾರಿಕಾ ಘಟಕಗಳಿಂದ ಮತ್ತು ಲೇಔಟ್ ಮಾಲೀಕರಿಂದ ೩೦ ರಿಂದ ೪೦ ಸಾವಿರ ಹಣ ವಸೂಲಿ ಮಾಡಿ, ಈ ಪೈಪ್ ಲೈನ್ ಹಾಕಲಾಗುತ್ತಿದೆ.
ನಂತರ ನಗರಸಭೆಯಿಂದ ಬಿಲ್ ಎತ್ತುವಳಿ ಮಾಡಲಾಗುತ್ತದೆ. ಆದರೆ, ಇಲ್ಲಿ ಗುತ್ತೇದಾರರು ಎನ್ನುವುದು ರಹಸ್ಯವಾಗಿದೆ. ಈ ಕಾರ್ಯವನ್ನು ಯಾರು ನಿರ್ವಹಿಸುತ್ತಿದ್ದಾರೆ. ನಗರಸಭೆ ಅಧಿಕಾರಿಗಳು ಈ ಕಾಮಗಾರಿಯಲ್ಲಿ ಭಾಗೀಯಾಗಿದ್ದಾರೆ. ಸ್ವತಃ ಜೆಇ ಅವರೇ ಕಾಮಗಾರಿ ಸ್ಥಳದಲ್ಲಿ ಕಾಣಿಸಿಕೊಂಡಿರುವ ಭಾವಚಿತ್ರವಿದೆ. ಆದರೂ, ಈ ವಿಷಯ ನಗರಸಭೆ ಪೌರಾಯುಕ್ತರಿಗೆ ಮಾಹಿತಿಯಿಲ್ಲ, ನಗರಸಭೆ ಅಧ್ಯಕ್ಷರಿಗೆ ಮಾಹಿತಿಯಿಲ್ಲ. ನಗರಸಭೆ ಚುನಾಯಿತ ಸಮಿತಿ ಮೌನವಾಗಿದೆ.
ಕುಡಿವ ನೀರಿನ ವಿಷಯದಲ್ಲಿ ಮಧ್ಯಸ್ಥಿತಿಕೆ ವಹಿಸಬೇಕಾದ ಶಾಸಕರು ಬಹಿರಂಗವಾಗಿ ಏನನ್ನು ಹೇಳುತ್ತಿಲ್ಲ. ಜಿಲ್ಲಾಧಿಕಾರಿಗಳ ಮುಂದೆ ದೂರು ಇದ್ದರೂ, ಇದನ್ನು ತಡೆಯುವ ಅಥವಾ ಇದಕೊಂದು ಆದೇಶ ನೀಡುವ ಪ್ರಯತ್ನವೂ ನಡೆಯುತ್ತಿಲ್ಲ. ಇತ್ತೀಚಿಗೆ ನಗರಸಭೆ ಖಾಸಗಿ ಸಂಸ್ಥೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಸ್ವಚ್ಛತೆ ಬೀದಿ ದೀಪ, ಕುಡಿವ ನೀರಿನ ಬಗ್ಗೆ ಗಮನ ಹರಿಸಬೇಕಾದ ನಗರಸಭೆ ಕೇವಲ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿದೆ ಎನ್ನುವ ಭಾವನೆ ಜನರಲ್ಲಿ ಮೂಡುವಂತೆ ಮಾಡಿದೆ.
ಯಾರಾದರೂ ಜನಪರವಾಗಿ ಯೋಚನೆ ಮಾಡುವ ಅಧಿಕಾರಿಗಳು, ಜನಪ್ರತಿನಿಧಿಗಳು ಉಳಿದುಕೊಂಡಿದ್ದರೇ, ಮನ್ಸಲಾಪೂರು ಕಾಮಗಾರಿ ಕಾನೂನು ಬಾಹೀರವೇ ಅಥವಾ ಕಾನೂನು ಬದ್ಧವೇ ಎನ್ನುವುದು ಸ್ಪಷ್ಟಪಡಿಸಬೇಕು. ಇಲ್ಲವಾದರೇ, ಎಲ್ಲಾ ಅಧಿಕಾರಿ ಮತ್ತು ಜನಪ್ರತಿನಿಧಿಗಳು ಈ ಪ್ರಕಣದಲ್ಲಿ ಶಾಮೀಲಾಗಿದ್ದಾರೆ ಎನ್ನುವ ಭಾವನೆ ಜನರಲ್ಲಿ ಮೂಡುವಂತೆ ಮಾಡಲಿದೆ.