ಮನ್ನೆಚ್ಚರಿಕೆ ಅನಾಹುತ ನಿಯಂತ್ರಣಕ್ಕೆ ಸಹಕಾರಿ

ಕೋಲಾರ, ನ.೧೨: ಮುನ್ನೆಚ್ಚರಿಕೆ ಇದ್ದಲ್ಲಿ ಸಂಭವನೀಯ ಅನಾಹುತಗಳನ್ನು ದಿಟ್ಟವಾಗಿ ಎದುರಿಸಬಹುದು ಎಂದು ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ಡಿ.ಎಂ.ರಾಘವೇಂದ್ರ ಅವರು ತಿಳಿಸಿದರು.
ನಗರದ ಅಂತರಗಂಗೆ ರಸ್ತೆಯಲ್ಲಿರುವ ವಿವೇಕ್ ಇನ್ಪೋಟೆಕ್ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಿದ್ದ, ರಾಷ್ಟ್ರೀಯ ವಿಪತ್ತು ನಿಯಂತ್ರಣ ಹಾಗೂ ಅಗ್ನಿಶಮನ ವಿಚಾರ ಅಂಗವಾಗಿ ಸ್ಪರ್ಧಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು.
ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮದ ಓದಿನ ಜೊತೆಗೆ ಪಠ್ಯೇತರ ವಿಷಯವಾಗಿ ದಿನನಿತ್ಯದ ಜೀವನದಲ್ಲಿ ಎದುರಾಗುವ ಬೆಂಕಿ, ಪ್ರವಾಹ, ಭೂಕಂಪ, ಕಟ್ಟಡ ಕುಸಿತ, ಅಪಘಾತಗಳು ಸೇರಿದಂತೆ ನಾನಾ ರೀತಿಯ ಅಪಾಯಕಾರಿ ಘಟನೆಗಳ ಬಗ್ಗೆ ಸಾಮಾನ್ಯ ತಿಳುವಳಿಕೆ ಪಡೆದುಕೊಳ್ಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಿವಿಧ ರೀತಿಯ ಅಗ್ನಿ ಅವಘಡಗಳ ಬಗ್ಗೆ ವಿವರವಾಗಿ ತಿಳಿಸಿ, ಅದರ ನಿಗ್ರಹಕ್ಕೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟಾಗುವಂತೆ ವಿವರಿಸಿದರು.