ಬೀದರ್:ಜು.25: ಬೀದರ್ ದಕ್ಷಿಣ ಕ್ಷೇತ್ರದ ಮನ್ನಾಏಖೇಳ್ಳಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣಕ್ಕೆ ದಿಢೀರನೆ ಭೇಟಿ ನೀಡಿದ ಸ್ಥಳೀಯ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ, ಆವರಣದಲ್ಲಿ ಸ್ವಚ್ಛತೆ ಕಾಪಾಡದಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಸಾರ್ವಜನಿಕರ ದೂರಿನ ಹಿನ್ನಲೆಯಲ್ಲಿ ದಿಢೀರ್ ಭೇಟಿ ನೀಡಿದ ಅವರು, ಶುಚಿತ್ವವಿಲ್ಲದ ಇಡೀ ಬಸ್ ನಿಲ್ದಾಣ ಕೆಟ್ಟ ವಾಸನೆಯಿಂದ ಕೂಡಿದೆ. ಬಸ್ ನಿಲ್ದಾಣದಲ್ಲಿರುವ ಶೌಚಾಲಯವನ್ನು ಸಮರ್ಪಕವಾಗಿ ನಿರ್ವಹಣೆ ಮಾಡದೇ ಇರುವುದನ್ನು ಹಾಗೂ ನಿಲ್ದಾಣ ಸ್ವಚ್ಛತೆ ಇಲ್ಲದೇ ಇರುವುದನ್ನು ಅವರು ಪರಿಶೀಲಿಸಿದರು,
ಮಳೆಯಾದರೆ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದ ಕಾರಣ ಸಮಸ್ಯೆ ಎದುರಾಗಿದೆ, ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು. ಕ್ಲೀನಿಂಗ್ ಏಜೆನ್ಸಿಯವರು ಸಹ ನಿಲ್ದಾಣದಲ್ಲಿ ಶುಚಿತ್ವ ಕಾಪಾಡದೇ ಇರುವುದರ ಬಗ್ಗೆ ಏಜೆನ್ಸಿಯವರಿಗೆ ಸೂಕ್ತ ಸೂಚನೆ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.
ಬಸ್ ನಿಲ್ದಾಣದಲ್ಲಿ ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಿ, ಕ್ರಮ ಕೈಗೊಳ್ಳಿ ಎಂದು ಡಿಪೆÇೀ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.
ನಿಲ್ದಾಣದೊಳಗಿರುವ ಅಂಗಡಿಗಳು ಮತ್ತು ಹೊಟೇಲ್‍ಗಳು ಉಪಯೋಗಿಸಿದ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯದಂತೆ ನೋಡಿಕೊಳ್ಳಬೇಕು. ಬಸ್ ನಿಲ್ದಾಣದಲ್ಲಿ ಸಮರ್ಪಕವಾದ ಕುಡಿಯುವ ನೀರಿನ ವ್ಯವಸ್ಥೆ ಇಲ್ಲವಾಗಿದೆ. ಪ್ರತಿದಿನ ಸಾವಿರಾರು ಜನರು ಬಂದು ಹೋಗುವುದರಿಂದ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಬಸ್ ನಿಲ್ದಾಣದ ಮುಂಭಾಗದಲ್ಲಿ ಕೆಸರುಮಯವಾಗಿ ಪ್ರಯಾಣಿಕರು ನಿಲ್ದಾಣದೊಳಗೆ ಬರಲು ಪ್ರಯಾಸ ಪಡುವ ಸ್ಥಿತಿಯಲ್ಲಿ ಇರುವುದರಿಂದ ನಿಲ್ದಾಣದ ಮುಂಭಾಗದಲ್ಲಿ ಗುಣಮಟ್ಟದ ಕಾಮಗಾರಿ ಮಾಡಿಸಲಾಗುವುದು ಎಂದರು. ಬಳಿಕ ಎಲ್ಲ ಗ್ರಾಮಗಳಿಗೆ ಸರಿಯಾದ ಸಮಯದಲ್ಲಿ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ನೀಡಿದರು.