ಮನೋವಿಕಾಸಕ್ಕೆ ಮಹಾತ್ಮರ ಆದರ್ಶದ ಬದುಕು ಸಹಾಯಕ


ಸಂಜೆವಾಣಿ ವಾರ್ತೆ
ಬಳ್ಳಾರಿ, ಮಾ.17: ಮನಸ್ಸು ಚಂಚಲವಾದದ್ದು, ಪಂಚೇಂದ್ರಿಯಗಳ ಮೂಲಕ ಹರಿದಾಡಿ ಸದಾ ಬೇಕು ಬೇಕೆಂಬ ಬಯಕೆಯಲ್ಲಿಯೇ ಬೇಯುತ್ತಿರುತ್ತದೆ. ಏನು ಬೇಕು..? ಎಷ್ಟು ಬೇಕೆಂಬುದನ್ನು ಅರಿಯದ ಈ ಮನಸ್ಸಿಗೆ ನೆಮ್ಮದಿ ಇಲ್ಲವೆಂದು ಗುಗ್ಗರಹಟ್ಟಿಯ ಸರಕಾರಿ ಪ್ರಾಥಮಿಕ ಶಾಲಾ ಸುಧಾರಣಾ ಸಮಿತಿಯ ಸದಸ್ಯರಾದ ಪುರುಷೋತ್ತಮ ಅಭಿಪ್ರಾಯಪಟ್ಟರು.
ಗುಗ್ಗರಹಟ್ಟಿಯ ಜೀವ ವಿಮಾ ಸಲಹೆಗಾರರಾದ ಕೆ.ಶಿವಶಂಕರಪ್ಪನವರ ಮನೆಯಲ್ಲಿ ಬಳ್ಳಾರಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ 279ನೇ ಮಹಾಮನೆ ಲಿಂ. ಅಚ್ಚಪ್ಪ ಸೋಮಪ್ಪ, ಹಂಪಮ್ಮ ದತ್ತಿ, ಲಿಂ. ಅಂಗಡಿ ನಾಗಪ್ಪ ದತ್ತಿ, ಲಿಂ. ಕಪ್ಪಗಲ್ಲು ನಬೀಸಾಬ್ ಹೊನ್ನೂರಮ್ಮ ದತ್ತಿ ಮನೆ ಮಂದಾರ ಮುದ್ದು ಮಕ್ಕಳ ದತ್ತಿ ಕಾರ್ಯಕ್ರಮದಲ್ಲಿ “ವಚನ ಅಧ್ಯಯನದಿಂದ ಮನೋವಿಕಾಸ” ವಿಷಯ ಕುರಿತು ಮಾತನಾಡುತ್ತಾ, ವಚನಗಳು ಕೇವಲ ಸಾಹಿತ್ಯ ಕೃಷಿಯಾಗಿರದೆ. ಅಂತರಂಗದಿಂದ ಅವತರಿಸಿದ ಅನುಭಾವದ ಅಣಿಮುತ್ತುಗಳಾಗಿವೆ. ಇವು ನೇರವಾಗಿ ಓದುಗನ ಆಂತರ್ಯವನ್ನು ಸ್ಪರ್ಶಿಸುವುದರಿಂದ ಅವನಿಗೆ ಅರಿವಿಲ್ಲದೇ ಮನಃಪರಿವರ್ತನೆ ಮಾಡಬೇಕೆಂಬ ವೇಗದ ಗಾಡಿಯ ವೇಗವನ್ನು ತಡೆಯುವುದೆಂದರು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಜೆ.ಯು.ಎಸ್. ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕರಾದ ಎಸ್,ಪಿ.ಹೊಂಬಾಳರವರು ಮಾತನಾಡುತ್ತಾ, ಮನುಷ್ಯನು ತನ್ನ ಜೀವನವನ್ನು ತಾನೇ ರೂಪಿಸಿಕೊಳ್ಳುವಾಗ ಅವನಿಗೆ ಶರಣರ, ಸಂತರ, ಮಹಾತ್ಮರ ಹಿತನುಡಿಗಳು ವಿವೇಕವನ್ನುಂಟು ಮಾಡುತ್ತವೆ. ಸನ್ನಡತೆಯನ್ನು ರೂಪಿಸುತ್ತವೆ. ಕಾರಣ, ಬಾಲ್ಯದಲ್ಲೇ ಮಕ್ಕಳಿಗೆ ಮಹಾತ್ಮರ ಮಾರ್ಗದರ್ಶನ ದೊರೆಯಬೇಕು ಎಂದರು.
ಜೀವ ವಿಮಾ ಸಲಹೆಗಾರರಾದ ಕೆ.ಶಿವಶಂಕರ ರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಭಕ್ತಿ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಅಂಜಿನಮ್ಮ ಮತ್ತು ಅಲವೇಲಮ್ಮ ವಚನ ಪ್ರಾರ್ಥನೆ ಮಾಡಿದರು. ಶಿಕ್ಷಕಿ  ತ್ರಿವೇಣಿ ಸ್ವಾಗತ ಕೋರಿ ಕಾರ್ಯಕ್ರಮ ನಿರ್ವಹಿಸಿದರು. ಪರಿಷತ್ ಅಧ್ಯಕ್ಷ ಕೆ.ಬಿ.ಸಿದ್ಧಲಿಂಗಪ್ಪ, ದತ್ತಿ ಪರಿಚಯ ಮಾಡಿ, ಶರಣು ಸಮರ್ಪಣೆ ಮಾಡಿದರು. ದತ್ತಿ ದಾಸೋಹಿ ಅಚ್ಚಪ್ಪ ನಾಗರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕರಾದ ಮಂಜುನಾಥ್, ತಿಪ್ಪೇಸ್ವಾಮಿ, ಕೆ.ಕಿರಣ್ ಕುಮಾರ್, ಭಕ್ತಿ ಮಂಡಳಿಯ ಸದಸ್ಯೆಯರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು