ಮನೋರೋಗಿಗಳ ಚಿಕಿತ್ಸಾ ಶಿಬಿರ ಉದ್ಘಾಟನೆ

ಚನ್ನಪಟ್ಟಣ,ಮೇ.೨೫- ಹಲವಾರು ಒತ್ತಡಗಳಿಂದ ಖಿನ್ನತೆಗೆ ಒಳಗಾಗುವವರು ತಮ್ಮ ದುಡುಕು ನಿರ್ಧಾರದಿಂದ ತಮ್ಮ ಜೀವನವನ್ನು ನಾಶಮಾಡಿಕೊಳ್ಳದೆ, ಸಂಬಂಧಿಸಿದ ಮನೋವೈದ್ಯರ ಬಳಿ ಸಲಹೆ ಸೂಚನೆ ಪಡೆದು ಆರೋಗ್ಯವಂತರಾಗಿ ಬದುಕು ನಡೆಸಬೇಕು ಎಂದು ಮನೋವೈದ್ಯ ಡಾ. ಆದರ್ಶ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಆಡಳಿತ, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿನ ಮನೋರೋಗಿಗಳ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಮಾತನಾಡಿದರು. ತಮ್ಮ ದಿನನಿತ್ಯದ ಒತ್ತಡ, ಕುಟುಂಬ ಕಲಹ ಹಾಗೂ ಹಲವಾರು ರೀತಿಯ ಒತ್ತಡಗಳಿಂದ ತಮ್ಮಗರಿವೇ ಇಲ್ಲದಂತೆ ಮಾನಸಿಕ ಖಿನ್ನತೆಗೆ ಒಳಗಾಗುವುದು ವಾಸ್ತವವಾಗಿದೆ, ಸಮಾಜದಲ್ಲಿ ಮಾನಿಸಿಕ ಖಿನ್ನತೆಗೆ ಒಳಗಾಗುವುವರ ಸಂಖ್ಯೆ ತುಸು ಹೆಚ್ಚಾಗಿ ಕಂಡು ಬರುತ್ತಿದೆ ಇದು ಕಳವಳಕಾರಿಯಾಗಿದೆ ಎಂದರು.
ತಮಗೆ ಎದುರಾಗಿರುವ ಮಾನಸಿಕ ಖಿನ್ನತೆಯನ್ನು ತಮ್ಮಲ್ಲೇ ಇಟ್ಟುಕೊಳ್ಳದೆ ನಿಮ್ಮ ಸ್ಥಳದಲ್ಲೇ ಇರುವ ನುರಿತ ಮನೋರೋಗ ವೈದ್ಯರಲ್ಲಿ ತಪಾಸಾಣೆ ಮಾಡಿಸಿಕೊಂಡು,ತಮ್ಮ ಖಿನ್ನತೆಗೆ ಸೂಕ್ತ ಸಲಹೆ,ಮಾರ್ಗದರ್ಶನ ಹಾಗೂ ಔಷೋಧಪಚಾರದಿಂದ ತಮ್ಮ ಖಿನ್ನತೆಯನ್ನು ದೂರ ಮಾಡಿಕೊಳ್ಳುವತ್ತಾ ಚಿಂತನೆ ಮಾಡಬೇಕು ಎಂದು ತಿಳಿಸಿದರು.
ಪ್ರತಿ ತಿಂಗಳಿಗೊಮ್ಮೆ ಅಂದರೆ ಕೊನೆಯ ಮಂಗಳವಾರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮನೋರೋಗಿಗಳ ಶಿಬಿರವನ್ನು ನೆಡಸಲಾಗುತ್ತಿದೆ,ಅಲ್ಲದೆ ಪ್ರತಿ ಸೋಮವಾರ ಜಿಲ್ಲಾ ಕೇಂದ್ರದ ನೂತನ ಜಿಲ್ಲಾ ಆಸ್ಪತ್ರೆಯಲ್ಲಿ ಮನೋರೋಗಿಗಳ ತಪಾಸಣೆ ಮಾಡಲಾಗುತ್ತಿದ್ದು, ಪ್ರತಿಯೊಬ್ಬರು ಇದರ ಪ್ರಯೋಜನವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.