ಮನೆ ಹಂಚಿಕೆಯಲ್ಲಿ ಕೊಳಗೇರಿ ಮಂಡಳಿಯ ಅಕ್ರಮ: ತನಿಖೆಗೆ ಆಗ್ರಹಿಸಿ ಪ್ರತಿಭಟನೆ

ಕಲಬುರಗಿ,ನ.3- ರಾಜೀವ ಅವಾಸ ಯೋಜನೆಯಡಿ ನಿರ್ಮಿಸಲಾದ ಮನೆಗಳ ಹಂಚಿಕೆಯಲ್ಲಿ ಅಕ್ರಮ ನಡೆಸಿರುವ ಕೊಳಗೇರಿ ಅಭಿವೃದ್ದಿ ಮಂಡಳಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಅಹಿಂದ ಚಿಂತಕರ ವೇದಿಕೆ ನೇತೃತ್ವದಲ್ಲಿಂದು ಪ್ರತಿಭಟನೆ ಕೈಗೊಳ್ಳಲಾಯಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಕೈಗೊಂಡ ವೇದಿಕೆಯ ಕಾರ್ಯಕರ್ತರು, ಇಲ್ಲಿನ ಜಾಫರಾಬಾದ ಸರ್ವೆ ನಂ.21/1ರಲ್ಲಿ ನಿರ್ಮಿಸಲಾಗಿರುವ ರಾಜೀವ ಅವಾಸ ಯೋಜನೆಯ ಮನೆಗಳನ್ನು ಅರ್ಹ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡದೆ ಅಕ್ರಮ ಮತ್ತು ಅವ್ಯವಹಾರ ನಡೆಸಲಾಗಿದೆ. ಈ ಬಗ್ಗೆ ತನಿಖೆ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ನೈಜ ಕೊಳಗೇರಿ ನಿವಾಸಿಗಳಿಗೆ ಹಂಚಿಕೆ ಮಾಡಬೇಕಾಗಿದ್ದ ಈ ಯೋಜನೆಯ ಮನೆಗಳನ್ನು ಉಳ್ಳವರಿಗೆ ಹಂಚಿಕೆ ಮಾಡಲಾಗಿದೆ. ತಮ್ಮ ಮನೆಗಳನ್ನು ಬಾಡಿಗೆಗೆ, ಲೀಜಿಗೆ ಮತ್ತು ಅಕ್ರಮ ಮಾರಾಟ ಮಾಡಿದ್ದಾರೆ ಈ ಕುರಿತು ಸಮಗ್ರ ತನಿಖೆ ಕೈಗೊಂಡು ಕೊಳಗೇರಿ ಅಭಿವೃದ್ಧದಿ ಮಂಡಳಿ ಮತ್ತು ಮಹಾನಗರ ಪಾಲಿಕೆಯ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು, ಹಾಗೂ ಇಲ್ಲಿನ ಅರ್ಹ ಕೊಳಗೇರಿ ನಿವಾಸಿಗಳಿಗೆ ಇಲ್ಲಿನ ಮನೆಗಳನ್ನು ಪುನಃ ಹಂಚಿಕೆ ಮಾಡಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸೈಬಣ್ಣ ಜಮಾದಾರ, ರಮೇಶ ಹಡಪದ, ಸಂಜು ಹೋಡಲ್ಕರ, ಪ್ರಕಾಶ ಪಟ್ಟೆದಾರ, ಬಕ್ಕಪ್ಪಾ ಬಿಮನಖೇಡ ಸೇರಿದಂತೆ ಜಾಫರಾಬಾದ ಕೊಳಗೇರಿ ನಿವಾಸಿಗಳು ಭಾಗವಹಿಸಿದ್ದರು.