ಮನೆ ಮೇಲ್ಚಾವಣಿ ಕುಸಿತ — ಚಿರನಿದ್ರೆಗೆ ಜಾರಿದ ಮಹಿಳೆ, ಅಪಾಯದಿಂದ ಮಗ ಪಾರು.

ಕೂಡ್ಲಿಗಿ.ನ. 23 :- ಇತ್ತೀಚಿಗೆ ನಿರಂತರವಾಗಿ ಸುರಿದ ಮಳೆಗೆ  ತೊಲೆಗಳಿರುವ ಹಳೇ  ಮನೆಯೊಂದು ತೇವ ಹಿಡಿದು ಇಂದು ನಸುಕಿನ ಜಾವ ಮನೆಯೊಳಗೆ ಮಲಗಿದ್ದ ಮಹಿಳೆ ಮೇಲೆ ಮೇಲ್ಚಾವಣಿ ಕುಸಿದು ಬಿದ್ದ ಪರಿಣಾಮ ಆ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದು ಅವಳ  ಜೊತೆಯಲ್ಲಿ ಮಲಗಿದ್ದ ಮಗ ಬೀಳುವ ಮುಂಜಾಗ್ರತೆಯಾಗಿ ಅರಿತು ಹೊರಹೋಗಿದ್ದರಿಂದ ಆತನು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ತಾಲೂಕಿನ ತುಪ್ಪಕಾನಹಳ್ಳಿಗ್ರಾಮದಲ್ಲಿ ಜರುಗಿದೆ.
ಜಿ.ಎಂ.ಕೊಟ್ರಮ್ಮ (55) ಮನೆ ಮೇಲ್ಚಾವಣಿ ಕುಸಿತಕ್ಕೆ ಬಲಿಯಾದ ಮಹಿಳೆಯಾಗಿದ್ದಾಳೆ.  ಈ ಮಹಿಳೆಯು ಕೂಲಿಯಿಂದ ಜೀವನ ಸಾಗಿಸುತ್ತಿದ್ದು ಎಪ್ಪತ್ತರ ಸಮೀಪದ ವಯಸ್ಸಿನ ರುದ್ರಯ್ಯಸ್ವಾಮಿ  ಎಂಬ ವೃದ್ಧ ಪತಿ, ಸುಮಾರು ಮೂವತ್ತು ವರ್ಷ ವಯಸ್ಸಿನ ಬುದ್ದಿಮಾಂದ್ಯ  ಸಿದ್ದಮ್ಮ ಎಂಬ ಮಗಳು, ಚಳ್ಳಕೆರೆಯ ಹೋಟೆಲ್ ನಲ್ಲಿ ಕೂಲಿಕೆಲಸ ಮಾಡುವ ಮಗ ಸಿದ್ದಲಿಂಗಪ್ಪರೊಂದಿಗೆ ಜೀವನ ಸಾಗಿಸುತ್ತಿದ್ದು ಸುಮಾರು ಮೂರ್ನಾಕು ದಶಕದ  ತೊಲೆಗಳಿರುವ  ಹಳೆಮನೆಯಲ್ಲಿ ವಾಸಮಾಡುತಿದ್ದ ಈ ಬಡಜೀವದ ಮನೆಗೆ ಗರಬಡಿದಂತೆ ಇಂದು ನಸುಕಿನ ಜಾವ ಎರಡು ಗಂಟೆ ಸುಮಾರಿಗೆ  ಇತ್ತೀಚಿಗೆ ಮೂರ್ನಾಕು ದಿನದಿಂದ ನಿರಂತರವಾಗಿ ಸುರಿದ ಮಳೆಯಿಂದ ನೀರಿಡಿದ ಮೇಲ್ಚಾವಣಿ  ಕುಸಿಯುತ್ತಿದ್ದ ಶಬ್ದ ಕೇಳಿದ  ತಾಯಿಯೊಂದಿಗೆ ಮಲಗಿದ್ದ ಮಗ ಸಿದ್ದಲಿಂಗಪ್ಪ ಎದ್ದು ಹೊರಬಂದು ಮತ್ತೆ ತಾಯಿಯನ್ನು ಕರೆದುಕೊಂಡು ಬರಲು ಒಳಬರುವಷ್ಟರಲ್ಲಿ ಮನೆ ಮೇಲ್ಚಾವಣಿ ಕುಸಿದು ಬಿದ್ದಿದ್ದು ಮಲಗಿದ್ದ ಕೊಟ್ರಮ್ಮ  ಪ್ರಕೃತಿಯ ವಿಧಿಯಾಟಕ್ಕೆ ಬಲಿಯಾಗಿ ಸ್ಥಳದಲ್ಲೇ ಕಣ್ಣು ತೆರೆಯದೆ ಚಿರನಿದ್ರೆಗೆ ಜಾರಿದ್ದಾಳೆ. ಮೃತಳ ಬುದ್ದಿಮಾಂದ್ಯ ಮಗಳು ಮತ್ತು ಪತಿ ಮನೆಯ ಹೊರಗೆ ಮಲಗಿದ್ದರಿಂದ ಪ್ರಾಣಾಪಾಯದಿಂದ ಪಾರಾದರೆ ಮೃತಳ ಮಗ ಸಿದ್ದಲಿಂಗಪ್ಪ ಮೇಲ್ಚಾವಣಿ ಕುಸಿತದ ಶಬ್ದ ಕೇಳುತಿದ್ದಂತೆ ಎದ್ದು ಹೊರಬಂದಿದ್ದರಿಂದ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದಿದೆ. ವಿಷಯ ತಿಳಿದು ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಗ್ರಾಮಲೆಕ್ಕಾಧಿಕಾರಿ ರಾಜಶೇಖರ ಬೇಟಿ ನೀಡಿ ಪರಿಶೀಲನೆ ನಡೆಸಿ ಕೂಡ್ಲಿಗಿ ತಹಸೀಲ್ದಾರ್ ರಿಗೆ ಮಾಹಿತಿ ತಿಳಿಸಿದ್ದು ತಕ್ಷಣ ಕೂಡ್ಲಿಗಿ ತಹಸೀಲ್ದಾರ್ ಟಿ.ಜಗದೀಶ ಹಾಗೂ ಕಂದಾಯ ನಿರೀಕ್ಷಕ ಕುಮಾರಸ್ವಾಮಿ ಬೇಟಿ ನೀಡಿ ಪರಿಶೀಲಿಸಿ ಮಾಹಿತಿ ಪಡೆದು ಜಿಲ್ಲಾಡಳಿತಕ್ಕೆ  ಮಾಹಿತಿ ತಿಳಿಸಿದ್ದಾರೆ. ಕೂಡ್ಲಿಗಿ ಪಿಎಸ್ಐ ಶರತಕುಮಾರ ಹಾಗೂ ಇತರೆ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿದ್ದಾರೆ.