ಮನೆ ಮೇಲ್ಗಡೆ ಇದ್ದಾಗ ಒಳನುಗ್ಗಿ ಕಳ್ಳನಿಂದ ನಗ, ನಾಣ್ಯ ದೋಚಿ ಪರಾರಿ

ಕಲಬುರಗಿ.ಜೂ 01: ಮನೆಯ ಮೇಲ್ಗಡೆ ಕುಟುಂಬದ ಸದಸ್ಯರು ಇದ್ದ ಸಂದರ್ಭದಲ್ಲಿ ಕಳ್ಳನೊಬ್ಬ ಮನೆಯೊಳಗೆ ನುಗ್ಗಿ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾದ ಘಟನೆ ನಗರದ ಎಂಎಸ್‍ಕೆ ಮಿಲ್ ಪ್ರದೇಶದ ಇಕಬಾಲ್ ಕಾಲೋನಿಯಲ್ಲಿ ವರದಿಯಾಗಿದೆ.
ಟೈಲರ್ ಆಗಿರುವ ಮೊಹ್ಮದ್ ಜುಲ್ಫೇಖಾರೋದ್ದೀನ್ ತಂದೆ ಮೊಹ್ಮದ್ ಇಫ್ತೆಖಾರೋದ್ದೀನ್ ಅವರ ಮನೆಯಲ್ಲಿಯೇ ಕಳ್ಳತನವಾಗಿದೆ. ಕಳೆದ ಮಂಗಳವಾರದಂದು ರಾತ್ರಿ 8 ಗಂಟೆಯ ಸುಮಾರಿಗೆ ಮನೆಯ ಮೇಲ್ಗಡೆ ಮೊಹ್ಮದ್ ಜುಲ್ಫೇಖಾರೋದ್ದೀನ್ ಅವರ ಪತ್ನಿ ಮತ್ತು ಮಕ್ಕಳು ಇರುವಾಗಲೇ ಅಪರಿಚಿತ ವ್ಯಕ್ತಿ ಮನೆಯೊಳಗೆ ನುಗ್ಗಿ ಮನೆಯ ಫ್ರಿಡ್ಜ್‍ನಲ್ಲಿ ಇದ್ದ 30,000ರೂ.ಗಳ ಮೌಲ್ಯದ 10 ಗ್ರಾಮ್ ತೂಕದ ಬಂಗಾರದ ಗಂಟನ್, ನಗದು 17000ರೂ.ಗಳನ್ನು ದೋಚಿಕೊಂಡು ಹೋಗುವಾಗ ಮೇಲ್ಗಡೆ ಇರುವವರು ನೋಡಿದರು.
ತಕ್ಷಣ ಮೊಬೈಲ್ ಮೂಲಕ ಮನೆಯ ಯಜಮಾನನಿಗೆ ಕರೆಸಿಕೊಂಡಾಗ ಕಳ್ಳತನ ಪತ್ತೆಯಾಯಿತು. ಈ ಕುರಿತು ಸಿಸಿಟಿವ್ಹಿಯಲ್ಲಿ ಸೆರೆಯಾಗಿದ್ದು, ಎಂ.ಬಿ. ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.