ಮನೆ ಮುಂದೆ ಭೂ ಕುಸಿತ: ಜನತೆ ಆತಂಕ

ಹನೂರು:ಏ:08: ತಾಲ್ಲೂಕಿನ ಬಿ.ಗುಂಡಾಪುರ ಗ್ರಾಮದ ಪರಿಶಿಷ್ಟ ಜಾತಿ ಸಮುದಾಯದವರು ವಾಸಿಸುವ ಡಾ.ಅಂಬೇಡ್ಕರ್ ಹಳೆ ಬೀದಿಯ ಚಿಕ್ಕಂಡು ಅವರ ಮನೆ ಮುಂದೆ ಭೂ ಕುಸಿತ ಉಂಟಾದ ಪರಿಣಾಮ ಭಾರಿ ಪ್ರಮಾಣದ ಆಳ ಕಾಣಿಸಿತೊಡಗಿದ್ದು ಇಲ್ಲಿನ ಜನತೆ ಆತಂಕ ಪಡುತ್ತಿದ್ದಾರೆ.
ಸಣ್ಣದಾದ ರಂದ್ರದ ಮಾದರಿಯಲ್ಲಿ ಭೂಮಿ ಬಾಯ್ದೆರಿದ್ದರೂ ಭಾರಿ ಆಳದ ಗುಂಡಿ ಕಾಣಿಸುತ್ತಿದ್ದು, ಇಲ್ಲಿ ಚಿಕ್ಕಮಕ್ಕಳು, ವಯೋವೃದ್ಧರು ಸೇರಿದಂತೆ ಸಾರ್ವಜನಿಕರು ಓಡಾಡುತ್ತಿದ್ದು ಮುಂದೆ ಇನ್ನೂ ಹೆಚ್ಚಿನ ಭೂ ಕುಸಿತ ಉಂಟಾಗುವ ಭೀತಿಯನ್ನು ಎದುರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದೆ ಆಗುವ ಅನಾಹುತವನ್ನು ತಪ್ಪಿಸಬೇಕೆಂದು ಇಲ್ಲಿನ ನಾಗರೀಕರು ಒತ್ತಾಯಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗ್ರಾಮಸ್ಥರು ಈ ಹಿಂದೆ ರಾಗಿ ಇನ್ನಿತರೆ ದವಸ ಧಾನ್ಯಗಳನ್ನು ಶೇಖರಿಸಲು ಗುಳಿ ಬಾವಿಯನ್ನು ತೆರೆಯುತ್ತಿದ್ದರು. ಆದರೆ ಇಲ್ಲಿ ಅಂತಹ ಗುಳಿ ಬಾವಿ ಇದ್ದದ್ದನ್ನು ಕಂಡಿಲ್ಲ. ಈ ಸ್ಥಳದಲ್ಲಿ ವಿಸ್ತಾರವಾದ ಆಳ ಕಂಡು ಬರುತ್ತಿದೆ ಆಗಾಗಿ ಭಯ ಪಡುವಂತಾಗಿದೆ ಎಂದು ತಿಳಿಸಿದ್ದಾರೆ.