ಮನೆ-ಮನೆ ಸಮೀಕ್ಷೆ ಮಾಡಿ, ಸೋಂಕಿತರ ಪತ್ತೆ ಕೈಗೊಳ್ಳುತ್ತಿರುವ ಜಿಲ್ಲಾಡಳಿತ ಕ್ರಮ ಶ್ಲಾಘನಿಯ: ಮಾಜಿ ಸಚಿವ ಎಂ.ಬಿ.ಪಾಟೀಲ್

ವಿಜಯಪುರ, ಮೇ.28-ಕೋವಿಡ್ 2ನೇ ಅಲೆ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲೆಯಲ್ಲಿ ಯಶಸ್ವಿಯಾಗಿ ಮನೆ-ಮನೆ ಸಮೀಕ್ಷೆ ಮಾಡಿ, ಸೋಂಕಿತರ ಪತ್ತೆಗೆ ಕೈಗೊಂಡ ಜಿಲ್ಲಾಡಳಿತದ ಕ್ರಮವನ್ನು ಮಾಜಿ ಸಚಿವ, ಶಾಸಕ ಎಂ.ಬಿ.ಪಾಟೀಲ್ ಶ್ಲಾಘಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು ಮನೆ-ಮನೆ ಸಮೀಕ್ಷೆ ಮಾಡಿ, ಅಗತ್ಯವಿದ್ದರಿಗೆ ಹೆಲ್ತ್‍ಕಿಟ್ ನೀಡಿ, ಹೋಬಳಿವಾರು ಕೊವಿಡ್‍ಕೇರ್ ಕೇಂದ್ರಗಳನ್ನು ಆರಂಭಿಸಿ ಮತ್ತು ನಿರಂತರ ಜಾಗೃತಿ ಮಾಡಲು ಕರಪತ್ರಗಳನ್ನು ನೀಡಿರುವ ವಿಜಯಪುರ ಜಿಲ್ಲಾಡಳಿತದ ಕ್ರಮ ಶ್ಲಾಘಿಸುತ್ತೇನೆ.
ಇದಕ್ಕಾಗಿ ಮುತುವರ್ಜಿ ವಹಿಸಿದ ಜಿಲ್ಲಾಧಿಕಾರಿ ಪಿ.ಸುನೀಲಕುಮಾರ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗೋವಿಂದರೆಡ್ಡಿ ಸೇರಿದಂತೆ ಜಿಲ್ಲಾ ಆರೋಗ್ಯಾಧಿಕಾರಿ, ಆರೋಗ್ಯ ಇಲಾಖೆಯ ಹಾಗೂ ಗ್ರಾಮಪಂಚಾಯತಗಳ ಎಲ್ಲ ಸಿಬ್ಬಂದಿ ಮತ್ತು ವಿಶೇಷವಾಗಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಕೋವಿಡ್ ಕಷ್ಟ ಕಾಲದಲ್ಲಿಯೂ ಮನೆ-ಮನೆಗೆ ತೆರಳಿ ಸಮೀಕ್ಷೆ ನಡೆಸಿದ್ದಕ್ಕಾಗಿ ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಸಮೀಕ್ಷೆಯನ್ನುಒಂದೇ ಬಾರಿ ಮಾಡಿ ನಿಲ್ಲಿಸದೇ, ಈ ಮಹಾಮಾರಿ ಅಂತ್ಯವಾಗುವವರೆಗೂ ಮುಂದುವರೆಸಿಕೊಂಡು ಹೋಗಬೇಕು. ಇದು ಆಯಾ ಪ್ರದೇಶಗಳಲ್ಲಿ ಹರಡುತ್ತಿರುವ ಸೋಂಕು ಪತ್ತೆ ಹಚ್ಚಲು, ಜನರಲ್ಲಿ ಆತ್ಮ ವಿಶ್ವಾಸ ಉಂಟು ಮಾಡಲು, ಕೋವಿಡ್ ಕೇರ್ ಕೇಂದ್ರದಲ್ಲಿ ಸೋಂಕಿತರ ಐಸೋಲೇಶನ್ ಮಾಡಲು ಮತ್ತು ತೀವ್ರ ತೊಂದರೆ ಇದ್ದವರಿಗೆ ಆಸ್ಪತ್ರೆಗೆ ದಾಖಲಿಸಲು ಈ ಪ್ರಕ್ರಿಯೆ ಅನಕೂಲಕರವಾಗುತ್ತದೆ ಎಂದು ಎಂ.ಬಿ.ಪಾಟೀಲ್ ಹೇಳಿದ್ದಾರೆ.