ಮನೆ ಮನೆ ತೆರಳುತ್ತಿರುವ ಜೋಕುಮಾರಸ್ವಾಮಿ!


ಸಂಜೆವಾಣಿ ವಾರ್ತೆ
ಕೊಟ್ಟೂರು, ಸೆ.09: ಗಣೇಶನು ಮರಣ ಹೊಂದಿ ಎರಡು ದಿನದ ನಂತರ ದೇವತಾ ಮನುಷ್ಯನಾಗಿ ಜನಿಸಿದವರೇ ಜೋಕುಮಾರಸ್ವಾಮಿ…..
ಉತ್ತರ ಕರ್ನಾಟಕ ಭಾಗದಲ್ಲಿ ಪರಂಪರೆಯನ್ನು ಉಳಿಸಿಕೊಂಡು ಬಂದ ಜಾನಪದ ಹಬ್ಬ ಇದಾಗಿದೆ.
ಪುರಾಣಗಳ ಪ್ರಕಾರ: ಜೋಕುಮಾರ ಅಂದರೆ ಉಡಾಳ, ಘಂಟಿಗ ಎಂಬ ಅರ್ಥವನ್ನು ಕೊಡುತ್ತದೆ. ಹಿಂದಿನ ಕಾಲದಲ್ಲಿ ಮಳೆ ಮತ್ತು ರೈತರ ಫಸಲು ಉತ್ತಮವಾಗಿ ಬರಲಿ ಎಂಬ ಉದ್ದೇಶದಿಂದ ಈ ಹಬ್ಬವನ್ನು ಆಚರಣೆ ಮಾಡಲಾಗುತ್ತಿತ್ತು ಎನ್ನುತ್ತಾರೆ ಹಿರಿಯರು.
ಮೂರ್ತಿಯ ತಯಾರಿ:
ಗಂಗಾಮತಸ್ಥರು ಕಪ್ಪು ಮಣ್ಣು, ಹತ್ತಿಯನ್ನು ಸೇರಿಸಿ, ಹದ ಮಾಡಿ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಮೂರ್ತಿಗೆ ಬಾಳೆ ಎಲೆಯನ್ನು ಸುಟ್ಟು ಔಡಲ ಎಣ್ಣೆಯಲ್ಲಿ ಬೆರೆಸಿ ಮೂರ್ತಿಗೆ ಸವರುವುದರ ಮೂಲಕ ಹಾಗೂ ಮೂರ್ತಿಯ ಮೇಲ್ಭಾಗದಲ್ಲಿ ಛತ್ರಿಯನ್ನು ಅಳವಡಿಸಿ ವಿವಿಧ ಹೂಗಳಿಂದ ಅಲಂಕರಿಸಲಾಗುತ್ತದೆ.
ತಾಲೂಕಿನ ಹ್ಯಾಳ್ಯಾ, ಮೋತಿಕಲ್ ತಾಂಡ, ಲೊಟ್ಟನಕೇರಿ, ಮಲ್ಲನಾಯಕನಹಳ್ಳಿ, ಅಯ್ಯನಹಳ್ಳಿ,
ಹೀಗೆ ನಾನಾ ಭಾಗಗಳಲ್ಲಿ ಜೋಕುಮಾರಸ್ವಾಮಿಯ ಆಚರಣೆ ಮಾಡುತ್ತಿದ್ದು ಅದರಲ್ಲೂ ಹ್ಯಾಳ್ಯಾದಲ್ಲಿ ಗಂಗಾಮತದ ಮಹಿಳೆಯರು,
ಬುಟ್ಟಿಯಲ್ಲಿ ಜೋಕುಮಾರಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿ, ಸ್ವಾಮಿಯ ಸುತ್ತ ಬೇವಿನ ಸೊಪ್ಪು ಮತ್ತು ವಿವಿಧ ಹೂಗಳಿಂದ ಅಲಂಕರಿಸಿ ಬುಟ್ಟಿಯನ್ನು ತಲೆಯ ಮೇಲೆ ಹೊತ್ತು ಮನೆ ಮನೆಗೆ ತೆರಳಿ “ಜೋಕುಮಾರ ಬಂದನವ್ವ ಬಾಗಲಾಗ ನನ್ನ ಕಂದಾದ ಬೆಣ್ಣೆ ಕೊಡಿರವ್ವ, ಅಡ್ಡಡ್ಡ ಮಳೆ ಬಂದು ದೊಡ್ಡ ಕೆರೆ ತುಂಬಿ, ನಮ್ಮ ಒಡ್ಡುಗಳೆಲ್ಲಾ ಹೈನಾಗಿ, ನನ್ನ ಕೊಮರ ನಿನ್ನ ಶೆಡ್ಡಿ ಮ್ಯಾಲೆ ಸಿರಿ ಬಂದು” ಎಂದು ಜೋಕುಮಾರ ಸ್ವಾಮಿಯ ಮೇಲೆ ಜಾನಪದ ಗೀತೆಯನ್ನು ಹಾಡುತ್ತಾ, ದವಸ ಧಾನ್ಯಗಳನ್ನು ಸಂಗ್ರಹಿಸಿ ಅದರ ಪ್ರತಿಯಾಗಿ ಜೋಕುಮಾರಸ್ವಾಮಿಯಲ್ಲಿರುವ ಬೇವಿನಸೊಪ್ಪು, ಕಪ್ಪು, ಹೂಗಳನ್ನು ನೀಡುತ್ತಾರೆ. ಈ ಇವುಗಳನ್ನು ತೆಗೆದುಕೊಂಡು ಹೊಲದಲ್ಲಿ ಬೆಳೆದ ಬೆಳೆಗಳ ನಾನಾ ರೀತಿಯ ಸೊಪ್ಪನ್ನು ಬೆರೆಸಿ ಕುದಿಸಲಾಗುತ್ತದೆ. ಹುಣ್ಣಿಮೆ ದಿನದಂದು ಜೋಕುಮಾರಸ್ವಾಮಿಯು ಹರಿಜನ ಓಣಿಯಲ್ಲಿ ಚಾಕುವಿನಿಂದ ಇರಿಸಿಕೊಂಡು ಮರಣವನ್ನು ಹೊಂದುತ್ತಾನೆ.
ಇದಾದ ನಂತರ ದಿನದಲ್ಲಿ ಹೊಲಗದ್ದೆಗಳಿಗೆ ಚರಗವನ್ನು ಚೆಲ್ಲಲಾಗುತ್ತದೆ. ಈ ಚರಗವನ್ನು ಚೆಲ್ಲುವುದರಿಂದ, ಫಸಲು ಹಸನಾಗಿ ಉತ್ತಮ ಇಳುವರಿ ಬರುತ್ತದೆ ಎನ್ನುತ್ತಾರೆ ಇಲ್ಲಿನ ರೈತರು.
ಜೋಕುಮಾರ ಸ್ವಾಮಿಯ ಬುಟ್ಟಿಯನ್ನು ಎತ್ತುವಾಗ ಮನಸ್ಸಿನಲ್ಲಿ ಕೆಲಸ ಕಾರ್ಯಗಳ ಬಗ್ಗೆ ಅಂದುಕೊಂಡು ಎತ್ತಿದರೆ ಅದು ಮೇಲಕ್ಕೆ ಏಳುತ್ತದೆ, ಆ ಕೆಲಸ ಕಾರ್ಯಗಳು ಆಗುವುದಿಲ್ಲ ಎಂದರೆ ಅದು ಮೇಲಕ್ಕೆ ಏಳುವುದಿಲ್ಲ ಎನ್ನುತ್ತಾರೆ ಗಂಗಾಮತದ ಮಹಿಳೆ ಗೌರಮ್ಮ.

ಸಂಪ್ರದಾಯದಂತೆ ಹಿಂದಿನ ಕಾಲದಲ್ಲಿ ನಮ್ಮ ಮತದವರು ಜೋಕುಮಾರ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆಚರಣೆಯನ್ನು ಮಾಡಿಕೊಂಡು ಬಂದಿದ್ದಾರೆ ಆ ಆಚರಣೆಯನ್ನು ನಾವು ಮುಂದುವರಿಸುತ್ತಿದ್ದೇವೆ
ಬಾರಿಕರ ಗಂಗಮ್ಮ
ಹ್ಯಾಳ್ಯಾ