ಮನೆ ಮನೆ ತೆರಳಿ ಕೋವಿಡ್ ಜಾಗೃತಿ

ಅಳ್ನಾವರ,ಮೇ29: ಪಟ್ಟಣ ಪಂಚಾಯ್ತಿ ರಚಿಸಿದ ಟಾಸ್ಕ್ ಪೋರ್ಸ್ ಸಮಿತಿ ಸದಸ್ಯರು ಶುಕ್ರವಾರ 6 ನೇ ವಾರ್ಡಿನ ಪ್ರತಿ ಮನೆಗೆ ಭೇಟಿ ನೀಡಿ ಜನರಿಗೆ ಕೋವಿಡ್ ಸೋಂಕು ಹರಡುವಿಕೆಯಿಂದ ತಡೆಯುವ ಬಗ್ಗೆ ಜಾಗೃತಿ ಮೂಡಿಸಿ, ಜನರ ಆರೋಗ್ಯ ವಿಚಾರಣೆ ಮಾಡಿತು.
ಪಟ್ಟಣ ಪಂಚಾಯ್ತಿ ಸದಸ್ಯ ತಮೀಮ ತೇರಗಾಂವ ಮಾತನಾಡಿ, ಸರ್ಕಾರ ಸೂಚಿಸಿದ ಮಾರ್ಗ ಸೂಚಿಗಳನ್ನು ಎಲ್ಲರೂ ಸರಿಯಾಗಿ ಪಾಲನೆ ಮಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅನಗತ್ಯವಾಗಿ ಮನೆಯಿಂದ ಹೊರಗೆ ಬರಬಾರದು. ಸೋಂಕಿನ ಲಕ್ಷಣ ಕಂಡು ಬಂದಲ್ಲಿ ತಕ್ಷಣ ವೈಧ್ಯರನ್ನು ಕಂಡು ತಪಾಸಣೆ ಮಾಡಿಸಿಕೊಳ್ಳಬೇಕು. ಪಟ್ಟಣದಲ್ಲಿ
ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆಅದರ ಲಾಭ ಪಡೆದುಕೊಳ್ಳಿ ಎಂದರು.
ಆಕ್ಷಿಮೀಟರ್ ಬಳಕೆ ಮಾಡಿ ಜನರ ಆರೋಗ್ಯ ತಪಾಸಣೆ ಮಾಡಲಾಯಿತು.ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಶಾಹು ಶಿಂದೆ, ಚೇತನ ಶಿಂದೆ, ಬಾಳು ಪಾಟೀಲ, ರಾಹುಲ್ ಶಿಂದೆ ಇದ್ದರು.
ಪಟ್ಟಣ ಪಂಚಾಯ್ತಿ ಆವರಣದಲ್ಲಿ ಪೌರ ಕಾರ್ಮಿಕರಿಗೆ ಪಿ ಪಿ ಕಿಟ್, ಮಾಸ್ಕ್, ಸ್ಯಾನಿಟೈಸರ್ ಹಾಗೂ ಸುರಕ್ಷಿತ ಸಾಧನಗಳನ್ನು ಮುಖ್ಯಾಧಿಕಾರಿ ಪಿ. ಕೆ. ಗುಡದಾರಿ ವಿತರಿಸಿದರು.
ಪಟ್ಟಣ ಪಂಚಾಯ್ತಿ ಕಾಂಗ್ರೆಸ್ ಪಕ್ಷ ಸದಸ್ಯರು ಕಸ್ತೂರಭಾ ಗಾಂಧಿ ಬಾಲಕಿಯರ ವಸತಿ ನಿಲಯದಲ್ಲಿ ತೆರೆದ ಕೋವಿಡ್ ಅರೈಕೆ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲಿಸಿದರು. ತಹಶೀಲ್ದಾರ್ ಅಮರೇಶ ಪಮ್ಮಾರ, ಪಟ್ಟಣ ಪಂಚಾಯ್ತಿ ಸದಸ್ಯರಾದ ಘಗನಲಾಲ ಪಟೇಲ, ಮಧು ಬಡಸ್ಕರ್ , ರೂಪೇಶ ಗುಂಡಕಲ್, ರಮೇಶ ಕುನ್ನೂರಕರ ಇದ್ದರು.
ಸಭೆ: ಕೋವಿಡ್ ನಿಯಂತ್ರಣ ಬಗ್ಗೆ ಚರ್ಚಿಸಲು ಪಟ್ಟಣ ಪಂಚಾಯ್ತಿ ಸಭಾ ಭವನದಲ್ಲಿ ವಿಶೇಷ ಸಭೆ ನಡೆಯಿತು. ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ಟಾಸ್ಕ್ ಪೋರ್ಸ ಸಮಿತಿಗೆ ತಲಾ ಒಬ್ಬರು ವೈದ್ಯ ಹಾಗೂ ನರ್ಸ್ ನೇಮಕ ಬಗ್ಗೆ ಚರ್ಚಿಸಲಾಯಿತು. ಹಲವು ಬಡಾವಣೆಗಳಲ್ಲಿ ಪೌರ ಕಾರ್ಮಿಕರು ಸೆನಿಟೈಜರ್ ದ್ರಾವಣ ಸಿಂಪಡಣೆ ಮಾಡಿದರು.