ಮನೆ ಮನೆಯ ಹೋಳಿಗೆ ಶಂಕರಲಿಂಗನ ಜೋಳಿಗೆಗೆ

ಕಲಬುರಗಿ:ಏ.07: ಮುತ್ತೈದಿಯರ ಒಡಲು (ಮಡಿಲು) ತಣ್ಣಗಿರಿಸುವುದೇ ಉಡಿ ತುಂಬುವ ಉದ್ದೇಶವಾಗಿದೆ. ಆದ್ದರಿಂದ, ಇವತ್ತು ಮುತ್ತೈದಿಯರಿಗೆ ಉಡಿ ತುಂಬಿ’ ಒಡಲು ತಣ್ಣಗಿರಿಸೋಣ ಎಂದು ಕರೆ ನೀಡಿದವರು ಚಿನ್ಮಯಗಿರಿಯ ಶ್ರೀಗುರು ಮಹಾಂತೇಶ್ವರ ಮಠದ ಪೀಠಾಧಿಪತಿ ಪೂಜ್ಯಶ್ರೀ ಷ.ಬ್ರ. ವೀರ ಮಹಾಂತೇಶ್ವರ ಶಿವಾಚಾರ್ಯರು. ಶನಿವಾರ 7ನೇ ದಿನದಂದು ಸಂಜೆಶ್ರೀ ಗುಡ್ಡಾಪೂರ ವರದಾನೇಶ್ವರಿ’ ಪುರಾಣ ಹೇಳುತ್ತಾ, ಗುಡ್ಡಾಪೂರದ ದಾನಮ್ಮ ಮದುವೆ ನಿಮಿತ್ತ ಮುತ್ತೈದಿಯವರಿಗೆ ಉಡಿ ತುಂಬು ಕಾರ್ಯಕ್ರಮ ಮುತ್ತೈದಿಯರು ಅಚ್ಚುಕಟ್ಟಾಗಿ ನಡೆಸಿಕೊಟ್ಟಿದ್ದೀರಿ. ಮುತ್ತೈದಿಯವರು ನಮ್ಮೆಲ್ಲರನ್ನು ಹಾಡಿ ಹರಿಸುತ್ತಾರೆ. ಇದರ ಫಲ ಕಡಣಿ ಪುರಕ್ಕೆ ದೊರೆತೇ ದೊರೆಯುವುದು ಎಂದು ಆತ್ಮವಿಶ್ವಾಸದಿಂದ ನುಡಿದರು.
ಉಡಿ ತುಂಬುವ ನಿಮಿತ್ತ ಭಕ್ತೆಲ್ಲರೂ ತಮ್ಮ ತಮ್ಮ ಮನೆಗಳಿಂದ ಹೋಳಿಗೆ ಮಾಡಿ ತಂದು ಶಂಕರಲಿಂಗನ ಜೋಳಿಗೆಗೆ ಅರ್ಪಿಸಿದ್ದೀರಿ. ನಿಮ್ಮ ಹೋಳಿಗೆಗೆಳು ಯಾವು ಎಂದು ಗುರುತಿಸಬಲ್ಲಿರೇನು ? ಸಾಧ್ಯವೇ ಇಲ್ಲ. ಎಲ್ಲೆಲ್ಲಿಂದಲೋ ಹೋಳಿಗೆಗಳು, ಹಾಲು, ತುಪ್ಪ ಹರಿದುಬಂದು ಶಂಕರಲಿಂಗನ ಜೋಳಿಗೆಗೆ ಸೇರಿ ಅದು ಮಹಾ ಪ್ರಸಾದವಾಗಿ ಪರಿವರ್ತನೆಯಾಗಿದೆ ಎಂದು ನುಡಿದರು.
ಶ್ರೀ ಶಂಕರಲಿಂಗೇಶ್ವರ ಶಿಲಾ ದೇಗುಲ ನಿರ್ಮಾಣ ಮಾಡುತ್ತಿರುವ ಗುತ್ತಿಗೆದಾರರಾಗಿರುವ ಉಡುಪಿಯ ಖ್ಯಾತ ಶಿಲ್ಪಿಗಳಾಗಿರುವ ರಾಜಶೇಖರ ಹೆಬ್ಬಾರ ಅವರು, ದೇಗುಲದ ವೈಶಿಷ್ಟ್ಯತೆ ಕುರಿತು ಭಕ್ತರಿಗೆ ಮನವರಿಕೆ ಮಾಡಿಕೊಟ್ಟರು.
ಅತಿಥಿಗಳಾಗಿ ಶಾಸಕ ಅಲ್ಲಮ್‍ಪ್ರಭು ಪಾಟೀಲರು ಆಗಮಿಸಿ, ಸಭೆಯನ್ನುದ್ಧೇಶಿಸಿ ಮಾತನಾಡಿದರು. ಉದ್ಯಮಿಗಳಾದ ಹಣಮಂತರಾಯ ಕಪನೂರು, ಶಾಂತಪ್ಪ ನಿಂಬಾಳ ಗೊಬ್ಬುರ (ಬಿ), ಶಹಾಪೂರಿನ ಉದ್ಯಮಿ ಬಸವರಾಜ ಮುದನೂರು, ಶಿಕ್ಷಕ ಶಿವಶರಣಪ್ಪ ಜಮಾದಾರ ಹಾವನೂರು, ಪತ್ರಕರ್ತ ಶ್ರೀಕಾಂತ ಪೊಲೀಸ್ ಪಾಟೀಲ ದಿಕ್ಸಂಗಾ ಸೇರಿದಂತೆ ಗಣ್ಯರು ಆಗಮಿಸಿದರು.
ವೇದಿಕೆ ಮೇಲೆ ಶರಣ ಸಿರಸಗಿಯ ಪೂಜ್ಯಶ್ರೀ ರುದ್ರಮುನಿ ದೇವರು ಉಪಸ್ಥಿತರಿದ್ದರು. ನ್ಯಾಯವಾದಿ ದೇವಿಂದ್ರಪ್ಪ ಎಕಲೂರು, ಮಹಾಂತೇಶ ಚೇಂಗಟಿ ನಿರೂಪಿಸಿದರು. ಅಪಾರ ಸಂಖ್ಯೆಯಲ್ಲಿ ಮುತ್ತೈದಿಯರಿಗೆ ಉಡಿ ತುಂಬಿ ಸಂಭ್ರಮಿಸಿದರು. ಇದೆಲ್ಲಕ್ಕೂ ನಂದೀಶ್ವರನಾಗಿರುವ ಕುಪೇಂದ್ರ ಬಿರಾಜದಾರ ಸೇರಿದಂತೆ ಅಪಾರ ಸಂಖ್ಯೆಯ ಭಕ್ತಕೋಟಿ ಜನರು ಸಾಕ್ಷಿಯಾಗಿದ್ದರು.
ಸಂಗೀತ ಸೇವೆ ಸಿಂಧಗಿಯ ಸಂತೋಷ ಹರಸೂರಮಠ ನೇತೃತ್ವದ ಕಲಾ ಬಳಗದವರಿಂದ ನಡೆಯಿತು.
ಇದೇ ಸಂದರ್ಭದಲ್ಲಿ ನಿವೃತ್ತ ಉಪನ್ಯಾಸಕ ಭೀಮಾಶಂಕರ ಡಿ. ಮಾಲಿ ಪಾಟೀಲ ಪಟ್ಟಣ ಅವರಿಗೆ ಶಂಕರ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ದಾನಮ್ಮದೇವಿ ಪುರಾಣ ಆಲಿಸಿ ಬದುಕು ಪಾವನವಾಗಿಸಿಕೊಳ್ಳಿ ಕಾಯಕಯೋಗಿ ಪೂಜ್ಯರ ಕರೆ ಭಕ್ತಿಯ ಉನ್ಮಾದದ ಉತ್ತುಂಗ ಶಿಖರಕ್ಕೆ ಕರೆದೊಯ್ಯುವ ಪುರಾಣಶ್ರೀ ಗುಡ್ಡಾಪೂರದ ದಾನೇಶ್ವರಿ’ ಪುರಾಣ. ಆದ್ದರಿಂದ, ಭಕ್ತಕೋಟಿ ಜನ ದಾನಮ್ಮದೇವಿಯ ಪುರಾಣ ಆಲಿಸಿ ತಮ್ಮ ಬದುಕು ಪಾವನಗೊಳಿಸಿಕೊಳ್ಳಿರಿ ಎಂದು ಕರೆ ನೀಡಿದವರು ಚಿನ್ಮಯಗಿರಿಯ ಶ್ರೀ ಗುರು ಮಹಾಂತೇಶ್ವರ ಮಠದ ಹಿರಿಯ ಪೂಜ್ಯರಾದ ಕಾಯಕಯೋಗಿ, ಕೃಷಿ ಋಷಿ ಷ.ಬ್ರ. ಸಿದ್ಧರಾಮ ಶಿವಾಚಾರ್ಯರು.
ಅವರು ಕಡಣಿಯಲ್ಲಿ ನಡೆಯುತ್ತಿರುವ ಪುರಾಣ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿ, ದೇವಲೋಕವೆಂಬುದು ಮೇಲೆಲ್ಲೂ ಕಾಣಿರೋ.. ಸತ್ಯವೇ ದೇವಲೋಕ, ಮಿತ್ಯವೇ ಮೃತ್ಯುಲೋಕ, ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದಿದ್ದಾರೆ. ಅಂತಹ ದೇವಲೋಕ ಇವತ್ತು ಕಡಣಿಯಲ್ಲಿ ಅನಾವರಣಗೊಂಡಿದೆ. ಈ ಕಾರ್ಯಕ್ರಮದ ವೈಭವ ಕಣ್ತುಂಬಿಕೊಳ್ಳುವುದೇ ಒಂದು ಪುಣ್ಯ ಎಂದು ನುಡಿದರು.
ಹೆತ್ತವರಿಗಾಗಿ ಸತ್ತ ಮೇಲೆ ಅತ್ತೇನೂ ಫಲ..?
ಈ ಜಗತ್ತು ತೋರಿಸಿದ ಜನ್ಮದಾತರಿಗೆ ಬದುಕಿರುವಾಗ ಹಸಿವು, ನೀರಡಿಕೆಗಳು ಆಲಿಸದ ಮಕ್ಕಳು, ಸತ್ತ ಮೇಲೆ ಅತ್ತರೇನು ಫಲ ಎಂದು ಪ್ರಶ್ನಿಸಿದವರು ಶರಣಸಿರಸಗಿಯ ಶ್ರೀಮಠದ ಮರಿದೇವರಾಗಿರುವ ಪೂಜ್ಯಶ್ರೀ ರುದ್ರಮುನಿ ದೇವರು.
ಅವರು ಕಡಣಿಯಲ್ಲಿ ಜರುಗುತ್ತಿರುವ `ಶ್ರೀ ಗುಡ್ಡಾಪೂರದ ದಾನೇಶ್ವರಿ’ ಪುರಾಣ ಕಾರ್ಯಕ್ರಮಕ್ಕೂ ಮೊದಲು ಭಕ್ತಕೋಟಿ ಜನರನ್ನುದ್ದೇಶಿಸಿ ಹಿತವಚನ ನೀಡುತ್ತಾ, ಮುಪ್ಪಾವಸ್ಥೆಯಲ್ಲಿ ಹೆತ್ತವರನ್ನು ವೃದ್ಧಾಶ್ರಮದಲ್ಲಿರಿಸಿ, ಅವರು ಸತ್ತ ಮೇಲೆ ಅವರ ಹೆಸರನ್ನು ಮಕ್ಕಳಿಗಿರಿಸಿ ಸಂಭ್ರಮಿಸಿದರೆ ಜನ್ಮದಾತರ ಋಣ ತೀರಿಸಲು ಸಾಧ್ಯವೇ ? ಎಂದು ಪ್ರಶ್ನಿಸಿದ್ದಾರೆ.
ಸತ್ತ ಮೇಲೆ ಎದೆ ಎದೆ ಬಡಿದುಕೊಂಡು ಅಳುವುದು, ಅವರ ಹೆಸರು ಮಕ್ಕಳಿಗಿರಿಸುವುದು, ಪುಣ್ಯ ಸ್ಮರಣೋತ್ಸವ ಮಾಡುವುದು ಇದೆಲ್ಲ ತೋರಿಕೆಗಾಗಿ ಮಾತ್ರ. ಬದಲಾಗಿ ಅವರು ಬದುಕಿರುವಾಗ ತಮ್ಮ ಒಡಲಾಳದ ಪ್ರೀತಿ ಧಾರೆಯೆರೆದು ಆರೈಕೆ ಮಾಡಿದರೆ ಇದಕ್ಕಿಂತ ಪುಣ್ಯದ ಸೇವೆ ಇನ್ನೊಂದಿಲ್ಲ ಎಂದು ಯುವಜನಾಂಗಕ್ಕೆ ತಿಳಿ ಹೇಳಿದರು.