ಮನೆ ಮನೆಗೆ ಮಂತ್ರಾಕ್ಷತೆ ವಿತರಣೆ

ಕಮಲಾಪೂರ:ಜ.16: ಅಯೋಧ್ಯೆಯ ಶ್ರೀರಾಮ ಮಂದಿರದಿಂದ ಆಗಮಿಸಿದ ಮಂತ್ರಾಕ್ಷತೆಯನ್ನು ಹಿಂದೂ ಪರ ಸಂಘಟನೆಗಳಿಂದ ಬರಮಾಡಿಕೊಂಡು ತಾಲೂಕಿನ ಕಟ್ಟೊಳಿ ಗ್ರಾಮದ ಹನುಮಾನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ ಮಾತನಾಡಿ, ಮಂತ್ರಾಕ್ಷತೆ ವಿತರಣೆ ಸಂದರ್ಭದಲ್ಲಿ ಯಾರೂ ಕೂಡ ಹಣವನ್ನು ಪಡೆಯುವಂತಿಲ್ಲ. ಭಕ್ತರು ಯಾವುದೇ ಹಣವನ್ನು ಅಥವಾ ಯಾವುದೇ ವಸ್ತು ರೂಪದಲ್ಲಿ ನೀಡಬಾರದು. ಇದೊಂದು ಅಭಿಯಾನವಾಗಿರುವ ಕಾರಣ ಯಾವುದೇ ರೀತಿಯ ವ್ರತಾಚಾರಣೆ, ಕಟ್ಟು ಪಾಡು ನಿಯಮಗಳು ಇರುವುದಿಲ್ಲ ಆದಾಗ್ಗಿಯೂ ಕೂಡಾ ಭಕ್ತರು ಅಕ್ಕಿಯೊಂದಿಗೆ ಸೇರಿಸಿ ಕಾಣಿಕೆ ಹಾಕಿದ್ದರೆ ಅದೆಲ್ಲವನ್ನು ಅಯೋಧ್ಯೆಯ ಶ್ರೀರಾಮನ ಮಂದಿರಕ್ಕೆ ಕಳಿಸಲಾಗುವುದು ಎಂದರು.ನಂತರ ಆರಂಭವಾದ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿತು. ಭಕ್ತರು ದಾರಿಯುದ್ಧಕ್ಕೂ ಶ್ರೀರಾಮನ ಕುರಿತು ಜಯಘೋಷ ಹಾಕಿದರು. ಜ. 22ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗುವುದರಿಂದ ಭಕ್ತರು ತಮ್ಮ ಮನೆಯಲ್ಲಿ ಪೂಜಾ ಕೈಂಕರ್ಯ ನೆರವೇರಿಸಿ ರಾಮ ಭಜನೆ ಮಾಡುವಂತೆ ಮನವಿ ಮಾಡಿದರು.ಈ ಸಂದರ್ಭದಲ್ಲಿ ಚನ್ನು ಹೊಳಕುಂದಾ,ಚೇತನ ಹೊಳಕುಂದಾ ,ಶಿವು ನಾವದಗಿ ಸೇರಿದಂತೆ ಇತರರು ಇದ್ದರು.