ಮನೆ ಮನೆಗೆ ತೆರಳಿ ಮಂತ್ರಾಕ್ಷತೆ ವಿತರಿಸಿದ ಶಾಸಕ ಪ್ರಭು ಚವ್ಹಾಣ

ಬೀದರ:ಜ.10:ಅಯೋಧ್ಯೆಯಲ್ಲಿನ ಶ್ರೀ ರಾಮಮಂದಿರ ಪ್ರಾಣಪ್ರತಿಷ್ಠಾಪನೆಯ ನಿಮಿತ್ತ ಮಾಜಿ ಸಚಿವರು ಹಾಗೂ ಶಾಸಕರಾದ ಪ್ರಭು ಬಿ. ಚವ್ಹಾಣ ಅವರು ಜನವರಿ 9ರಂದು ಔರಾದ(ಬಿ) ಪಟ್ಟಣದ ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯನ್ನು ವಿತರಿಸಿದರು.

ಬೋಂತಿ ತಾಂಡಾ ನಿವಾಸದಲ್ಲಿ ಶ್ರೀರಾಮ ಭಾವಚಿತ್ರ ಹಾಗೂ ರಾಮಭಕ್ತರಿಂದ ಸ್ವೀಕರಿಸಿದ ಮಂತ್ರಾಕ್ಷತೆಗೆ ಪೂಜೆ ನೆರವೇರಿಸಿ ಔರಾದ ಪಟ್ಟಣಕ್ಕೆ ಆಗಮಿಸಿದ ಶಾಸಕರು, ಅಗ್ನಿ ಬಸವಣ್ಣ ದೇವಸ್ಥಾದಲ್ಲಿ ಪೂಜೆ ನೆರವೇರಿಸುವ ಮೂಲಕ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಪಟ್ಟಣದ ಹಲವು ಮನೆಗಳಿಗೆ ತೆರಳಿ ಮಂತ್ರಾಕ್ಷತೆ ಹಾಗೂ ಕರಪತ್ರಗಳನ್ನು ಹಂಚಿದರು.

ಈ ವೇಳೆ ಮಾತನಾಡಿದ ಅವರು, ಆಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕೆಂಬುದು ಕೋಟ್ಯಂತರ ಹಿಂದುಗಳ ಅನೇಕ ವರ್ಷಗಳ ಬೇಡಿಕೆಯಾಗಿತು. ಈ ಕನಸು ಈಗ ಸಾಕಾರಗೊಳ್ಳುತ್ತಿದೆ. ರಾಮಜನ್ಮ ಭೂಮಿ ಆಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣಗೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಅಮೃತ ಹಸ್ತದಿಂದ ಪ್ರಾಣ ಪ್ರತಿಷ್ಠಾಪನೆ ಕಾರ್ಯ ನಡೆಯುತ್ತಿದೆ. ಅಂದು ದೇಶದ ಎಲ್ಲ ಕಡೆಗಳಲ್ಲಿ ವಿಶೇಷ ಕಾರ್ಯಕ್ರಮಗಳು, ಪೂಜೆ, ಅರ್ಚನೆ, ಹೋಮ-ಹವನ, ಸತ್ಸಂಗ, ಭಜನೆಯಂತಹ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಬಿಜೆಪಿ ಔರಾದ ಮಂಡಲದ ವತಿಯಿಂದ ಮನೆ ಮನೆಗೆ ತೆರಳಿ ಆಮಂತ್ರಣ ನೀಡಲಾಗುತ್ತಿದೆ. ಆ ದಿನ ಪ್ರತಿ ಮನೆಯಲ್ಲಿ ದೀಪಗಳನ್ನು ಉರಿಸಿ, ಕುಟುಂಬದ ಸದಸ್ಯರೆಲ್ಲರೂ ಸೇರಿ ಪೂಜೆ ಮಾಡಬೇಕು. ದೀಪಾವಳಿ ಮಾದರಿಯಲ್ಲಿ ಹಬ್ಬವನ್ನು ಆಚರಿಸಿ ಸಂಭ್ರಮಿಸಬೇಕೆಂದು ಮನವಿ ಮಾಡಿದರು.

ಹಿಂದುಪರ ಸಂಘಟನೆಗಳು ಹಾಗೂ ಬಿಜೆಪಿ ಕಾರ್ಯಕರ್ತರು ಕ್ಷೇತ್ರದ ಪ್ರತಿ ಮನೆಗಳಿಗೆ ಭೇಟಿ ನೀಡಿ ಮಂತ್ರಾಕ್ಷತೆಯನ್ನು ವಿತರಿಸುತ್ತಿದ್ದಾರೆ. ಈ ಅಭಿಯಾನ ಯಶಸ್ವಿಯಾಗಿ ನಡೆಯಬೇಕು. ಕ್ಷೇತ್ರದ 255 ಬೂತ್‍ಗಳಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಬೇಕು. ಬೂತ್ ಅಧ್ಯಕ್ಷರು ಮನೆ ಮನೆಗೆ ತೆರಳಿ ಮಂತ್ರಾಕ್ಷತೆಯನ್ನು ವಿತರಿಸಬೇಕು. ಮಂಡಲ ಅಧ್ಯಕ್ಷರು ಹಾಗೂ ಎಲ್ಲ ಪದಾಧಿಕಾರಿಗಳು ಭಕ್ತಿಪೂರ್ವಕವಾಗಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ತಿಳಿಸಿದರು.

ಶ್ರೀರಾಮ ಪ್ರಾಣಪ್ರತಿಷ್ಠಾಪನೆ ದಿನದಂದು ಎಲ್ಲ ಕಡೆಗಳಲ್ಲಿ ದೇವಸ್ಥಾನಗಳನ್ನು ಸ್ವಚ್ಛಗೊಳಿಸಿ ಪೂಜೆ ನೆರವೇರಿಸಬೇಕು ದೀಪ ಉರಿಸಬೇಕು. ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ಎಲ್ಲ ಮನೆಗಳಿಗೆ ಭೇಟಿ ನೀಡಿ ಈ ವಿಷಯವನ್ನು ತಿಳಿಸಬೇಕು. ಅಂದು ಎಲ್ಲ ಮನೆಗಳಲ್ಲಿ ಸಂಭ್ರಮದ ವಾತಾವರಣ ಇರುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಮುಖಂರಾದ ಶಿವಾಜಿ ಪಾಟೀಲ ಮುಂಗನಾಳ, ರಾಮಶೆಟ್ಟಿ ಪನ್ನಾಳೆ, ದೊಂಡಿಭಾ ನರೋಟೆ, ಖಂಡೋಬಾ ಕಂಗಟೆ, ರಾಮರೆಡ್ಡಿ ಪಾಟೀಲ, ಶಿವರಾಜ ಅಲ್ಮಾಜೆ, ಅಶೋಕ ಅಲ್ಮಾಜೆ, ಸಂತೋಷ ಪೆÇೀಲಕವಾರ, ಪ್ರಕಾಶ ಅಲ್ಮಾಜೆ, ಕೇರಬಾ ಪವಾರ್, ರಮೇಶ ಬಿರಾದಾರ, ರಾಜಕುಮಾರ ಸೋರಾಳೆ, ಸಚಿನ ರಾಠೋಡ, ರವೀಂದ್ರ ರೆಡ್ಡಿ, ಜಗದೀಶ ಪಾಟೀಲ, ಧನಾಜಿ ರಾಠೋಡ, ಸಂಜು ಮುರ್ಕೆ, ಸಚಿನ ಬಿರಾದಾರ, ವಸಂತ ರಾಠೋಡ, ಗಜಾನಂದ ವಟಗೆ, ಸಂಜು ಒಡೆಯರ ಸೇರಿದಂತೆ ಇತರರು ಉಪಸ್ಥಿತರಿದ್ದರು.