ಮನೆ ಮನೆಗೆ ತೆರಳಿ ಬೂಸ್ಟರ್ ಲಸಿಕೆ ನೀಡಿ

ಆರೋಗ್ಯ ಇಲಾಖೆ ಆಯೋಜಿಸಿದ್ದ ೧೮ ವರ್ಷಕ್ಕಿಂತ ಮೇಲ್ಪಟ್ಟ ನಾಗರಿಕರಿಗೆ ಮುನ್ನೆಚ್ಚರಿಕಾ ಡೋಸ್ ನೀಡುವ ಕೋವಿಡ್ ಲಸಿಕಾಕರಣ ಅಮೃತ ಮಹೋತ್ಸವಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದರು. ಸಚಿವರಾದ ಡಾ. ಕೆ. ಸುಧಾಕರ್, ಮುರುಗೇಶ್ ನಿರಾಣಿ ಇದ್ದಾರೆ.

ಬೆಂಗಳೂರು,ಜು.೧೬- ಆರೋಗ್ಯ ಮತ್ತು ಶಿಕ್ಷಣದಿಂದ ದೇಶದ ಪ್ರಗತಿ ಸಾಧ್ಯ, ಸದೃಢ ದೇಶ ನಿರ್ಮಾಣಕ್ಕೆ ಆರೋಗ್ಯವಂತ ಸಮಾಜದ ಪಾತ್ರ ದೊಡ್ಡದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಆರೋಗ್ಯ ಇಲಾಖೆ ಆಯೋಜಿಸಿದ್ದ ೧೮ ವರ್ಷ ಮೇಲ್ಪಟ್ಟ ನಾಗರಿಕರಿಗೆ ಮುನ್ನೆಚ್ಚೆರಿಕಾ ಡೋಸ್ ನೀಡುವ ಕೋವಿಡ್ ಲಸಿಕೀಕರಣ ಅಮೃತ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕೋವಿಡ್ ಮುನ್ನೆಚ್ಚೆರಿಕಾ ಡೋಸ್ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆರೋಗ್ಯಕಾರ್ಯಕರ್ತರಿಗೆ ಕರೆ ನೀಡಿ ಮನೆ ಮನೆಗೆ ತೆರಳಿ ಎಲ್ಲರಿಗೂ ಬೂಸ್ಟರ್ ಡೋಸ್ ಲಸಿಕೆ ನೀಡಿ ಎಂದರು.
ಕೋವಿಡ್‌ನ್ನು ದೇಶದಲ್ಲಿ ಯಶಸ್ವಿಯಾಗಿ ನಿಯಂತ್ರಿಸಲಾಗಿದೆ. ಇದಕ್ಕಾಗಿ ಪ್ರಧಾನಿ ನರೇಂದ್ರಮೋದಿ ಮತ್ತು ಎಲ್ಲ ಆರೋಗ್ಯ ವಲಯದ ತಜ್ಞರು, ಕಾರ್ಯಕರ್ತರು, ವಿಜ್ಞಾನಿಗಳಿಗೆ ಅಭಿನಂದನೆ ಹೇಳಿದ ಮುಖ್ಯಮಂತ್ರಿಗಳು, ಈ ಹಿಂದೆಯಲ್ಲೆಲ್ಲ ಯಾವುದೇ ರೋಗಗಳು ಬಂದಾಗ ಲಸಿಕೆ ತಯಾರಾಗಿ ಜನಸಾಮಾನ್ಯರಿಗೆ ಸಿಗಲು ೧೦-೧೨ ವರ್ಷಗಳಾಗುತ್ತಿತ್ತು, ಆದರೆ, ಪ್ರಧಾನಿ ನರೇಂದ್ರಮೋದಿ ಅವರ ಪ್ರಯತ್ನದಿಂದ ೬ ತಿಂಗಳಲ್ಲೇ ಲಭ್ಯವಾಗುವಂತಾಯಿತು, ದೇಶದಲ್ಲೇ ಲಸಿಕೆ ತಯಾರಿಕೆಯ ಈ ಕಾರ್ಯದಿಂದ ವಿಜ್ಞಾನಿಗಳು ಹೆಚ್ಚು ಉತ್ತೇಜನ ಪಡೆಯುವಂತಾಯಿತು. ಭಾರತ ೧೩೦ ಕೋಟಿ ಜನರಿಗೆ ಲಸಿಕೆ ನೀಡುವ ಮೂಲಕ ಕೋವಿಡ್‌ನ್ನು ಸಮರ್ಥವಾಗಿ ನಿಯಂತ್ರಿಸಿದ್ದು ಜಗತ್ತಿಗೆ ಮಾದರಿಯಾಗಿದೆ ಎಂದರು.
ಕೋವಿಡ್ ಸಂದರ್ಭದಲ್ಲಿ ವೈದ್ಯರು ಹಾಗೂ ಆರೋಗ್ಯ ಕಾರ್ಯಕರ್ತರು ನಿಜವಾದ ನಾಯಕರಾಗಿ ಕೆಲಸ ಮಾಡಿದರು. ಜನರ ಮಧ್ಯೆ ಹೋಗಿ ಕೋವಿಡ್‌ನ ಲಸಿಕೆ ನೀಡುವುದರ ಜತೆಗೆ ಕೋವಿಡ್‌ನಿಯಂತ್ರಣದ ಬಗ್ಗೆಯೂ ಸೂಕ್ತ ಮಾರ್ಗದರ್ಶನ ಮಾಡುವ ಮೂಲಕ ನಾಯಕತ್ವ ಗುಣವನ್ನು ಪ್ರದರ್ಶಿಸಿದ್ದಾರೆ ಎಂದರು.
ರಾಜ್ಯದಲ್ಲೂ ಕೋವಿಡ್ ಲಸಿಕೀಕರಣ ಶೇ. ೧೦೦ರಷ್ಟು ಯಶಸ್ವಿಯಾಗಿದೆ. ಇದಕ್ಕೆ ಕಾರಣರಾದ ಎಲ್ಲರಿಗೂ ಧನ್ಯವಾದ ಎಂಬ ಮುಖ್ಯಮಂತ್ರಿಗಳು ಹೇಳಿ ಬೂಸ್ಟರ್ ಡೋಸ್ ಲಸಿಕೀಕರಣ ಯಶಸ್ವಿಗೊಳಿಸುವಂತೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಸಚಿವರಾದ ಡಾ. ಕೆ. ಸುಧಾಕರ್, ಕೈಗಾರಿಕಾ ಸಚಿವ ಮುರುಗೇಶ್‌ನಿರಾಣಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.