
ಸಾಂಸ್ಕೃತಿಕ ನಗರ ಮೈಸೂರಿನಲ್ಲಿ ರಾಜ್ಯಸರ್ಕಾರದ ಮಹತ್ವಾಂಕ್ಷಿ ಯೋಜನೆಯಾದ ಗೃಹಲಕ್ಷ್ಮಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಚಾಲನೆ ನೀಡಿದರು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಲಕ್ಷ್ಮಿಹೆಬ್ಬಾಳ್ಕರ್, ಚಲುವರಾಯಸ್ವಾಮಿ, ಡಾ. ಹೆಚ್.ಸಿ. ಮಹದೇವಪ್ಪ ಮತ್ತಿತರರು ಇದ್ದಾರೆ.
ಬೆಂಗಳೂರು/ಮೈಸೂರು,ಆ.೩೦-ದೇಶದಲ್ಲಿ ಮೊಟ್ಟಮೊದಲ ಬಾರಿಗೆ ಕುಟುಂಬದ ಮನೆಯೊಡತಿಗೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ ಜಮೆ ಮಾಡುವ ರಾಜ್ಯ ಸರ್ಕಾರದ ಮಹತ್ವಾಂಕ್ಷಿ ಗ್ಯಾರಂಟಿಗಳಲ್ಲಿ ಒಂದಾದ ಮನೆ ಮನೆಗೆ ಲಕ್ಷಿ ನೀಡುವ ” ಗೃಹಲಕ್ಷ್ಮಿ” ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತವರೂರಲ್ಲಿ ಐತಿಹಾಸಿಕ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ಸಿಕ್ಕಿದೆ.ರಾಜ್ಯ ಕಾಂಗ್ರೆಸ್ ಸರ್ಕಾರದ ಪ್ರಮುಖ ಐದು ಗ್ಯಾರಂಟಿಗಳಲ್ಲಿ ನಾಲ್ಕನೇ ಯೋಜನೆಯಾದ “ ಗೃಹಲಕ್ಷ್ಮಿ” ಯೋಜನೆಯಡಿ ರಾಜ್ಯದ ೧ ಕೋಟಿ ೮ ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ ಮೊತ್ತವನ್ನು ಮಹಿಳೆಯರ ಬ್ಯಾಂಕ್ ಖಾತೆಗೆ ಜಮೆ ಮಾಡುವ ಯೋಜನೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸಮ್ಮುಖದಲ್ಲಿ ಯುವ ರಾಹುಲ್ ಗಾಂಧಿ ಚಾಲನೆ ನೀಡಿದ್ದು ರಾಜ್ಯದ್ಯಂತ ಏಕಕಾಲಕ್ಕೆ ಯೋಜನೆ ಜಾರಿಯಾಗಿದ್ದು ಮಹಿಳೆಯರ ಮುಖದಲ್ಲಿ ಮಂದಹಾಸ ಮೂಡಿದೆ.
ಮಹಾರಾಜ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸೇರಿದಂತೆ ರಾಜ್ಯ ಸರ್ಕಾರದ ಹಿರಿಯ ಸಚಿವರು, ಪಕ್ಷದ ಮುಖಂಡರ ಸಮ್ಮುಖದಲ್ಲಿ ಚಾಲನೆ ನೀಡುವ ಮೂಲಕ ನುಡಿದಂತೆ ನಡೆದಿದ್ದೇವೆ ಎನ್ನುವುದನ್ನು ಕಾಂಗ್ರೆಸ್ ಪಕ್ಷ ಸಾಬೀತು ಮಾಡಿದೆ.ರಾಜ್ಯದ ಇತಿಹಾಸದಲ್ಲಿ ಹಿಂದೆಂದೂ ಕಂಡು ಕೇಳರಿಯದ ಐತಿಹಾಸಿಕ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಈಗಾಗಲೇ ಶಕ್ತಿ, ಗೃಹಜ್ಯೋತಿ,ಅನ್ನಭಾಗ್ಯ ಯೋಜನೆ ಜಾರಿ ಬಳಿಕ ನಾಲ್ಕನೇ ಪ್ರಮುಖ ಗ್ಯಾರಂಟಿ ಯೋಜನೆಯಾದ “ಗೃಹಲಕ್ಷಿ” ಜಾರಿ ಮಾಡಿದೆ.
ಈ ಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಸೇರಿದಂತೆ ಎಲ್ಲರ ಮುಖದಲ್ಲಿ ನುಡಿದಂತೆ ನಡೆಯುತ್ತಿದ್ದೇವೆ ಎನ್ನುವ ಭಾವ ಮೂಡಿತ್ತು. ತಮ್ಮ ಖಾತೆಯ ಇನ್ನು ಮುಂದೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ ಜಮೆಯಾಗಲಿದೆ. ಇದರಿಂದಾಗಿ ಮಹಿಳೆಯರ ಮೊಗದಲ್ಲಿ ಸಂತಸ ಗರಿಗೆದರಿದೆ.
ಲಕ್ಷಕ್ಕೂ ಮೀರಿದ ಮಹಿಳೆಯರು ಭಾಗಿ:
ಮನೆಯೊಡತಿಗೆ ೨ ಸಾವಿರ ರೂಪಾಯಿ ಜಾರಿ ಮಾಡುವ ಯೋಜನೆಗೆ ಮೈಸೂರಿನಲ್ಲಿ ಚಾಲನೆ ಸಿಕ್ಕಿದ್ದು ಲಕ್ಷಾಂತರ ಮಹಿಳೆಯರು ಭಾಗಿಯಾಗುವ ಮೂಲಕ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದರು.ಒಂದು ಕಡೆ ಮನೆಯೊಡತಿಯರನ್ನು ಆರ್ಥಿಕವಾಗಿ ಸಬಲೀಕರಣ ಮಾಡುವ ಉದ್ದೇಶ ಒಂದೆಡೆಯಾದರೆ ಮೈಸೂರು, ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆ ಮತ್ತು ಶಕ್ತಿ ಪ್ರದರ್ಶನಕ್ಕೂ ಈ ಕಾರ್‍ಯಕ್ರಮ ವೇದಿಕೆಯಾಯಿತು. ಅಲ್ಲದೆ ಸರ್ಕಾರ ನೂರು ದಿನ ಪೂರೈಸಿದ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆಯ ಶಕ್ತಿಪ್ರದರ್ಶನಕ್ಕೂ ಕಾರಣವಾಯಿತು.
ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಜನರು ಭಾಗಿಯಾಗುವ ಮೂಲಕ ಐತಿಹಾಸಿಕ ಕ್ಷಣದಲ್ಲಿ ಸಾಕ್ಷಿಯಾಗಿದ್ದು. ಮಹಿಳೆಯರು ಸಂತಸ ವ್ಯಕ್ತಪಡಿಸಿದ್ದಾರೆ.
ಹಬ್ಬದ ವಾತಾವರಣ:
ರಾಜ್ಯ ಸರ್ಕಾರ ಇತ್ತೀಚೆಗೆ ೧೦೦ ದಿನ ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ನಾಲ್ಕನೇ ಗ್ಯಾರಂಟಿ ಯೋಜನೆಗೆ ಮೈಸೂರಿನಲ್ಲಿ ಚಾಲನೆ ಸಿಕ್ಕಿದ್ದು ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಲ್ಲಿಯೂ ಕಾಂಗ್ರೆಸ್ ಪಕ್ಷದ ಗುಣಗಾನ ನಡೆಯುತ್ತಿದ್ದು ,ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಮಹಿಳೆಯರೂ ಸೇರಿದಂತೆ ರಾಜ್ಯದ ಜನರು ಹರ್ಷ ವ್ಯಕ್ತಪಡಿಸಿದ್ದಾರೆ.ವಿಧಾನಸಭೆ ಚುನಾವಣೆಗೂ ಮುನ್ನ ಘೋಷಣೆ ಮಾಡಿದ್ದ ಪಂಚ ಖಾತ್ರಿ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದೊಂದೆ ಗ್ಯಾರಂಟಿಗಳನ್ನು ಜಾರಿ ಮಾಡುತ್ತಿದ್ದು ರಾಜ್ಯ ಸರ್ಕಾರ ನುಡಿದಂತೆ ನಡೆದಿದೆ. ಈ ಮೂಲಕ ರಾಜ್ಯದ ಜನರಿಗೆ ನೀಡಿದ್ದ ವಾಗ್ದಾನವನ್ನು ಈಡೇರಿಸಿದೆ.
ಮೈಸೂರಿನ ತುಂಬೆಲ್ಲಾ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಯೋಜನೆಯಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆ ಜಾರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ಹಾಗು ದೇಶದ ಕಾಂಗ್ರೆಸ್ ನಾಯಕರ ಭಾವಚಿತ್ರಗಳ ಫೋಸ್ಟರ್ ಬ್ಯಾನರ್, ಬಂಟಿಗ್ಸ್‌ಗಳು ರಾರಾಜಿಸಿದವು.
ದೆಹಲಿಯಿಂದ ವಿಶೇಷ ವಿಮಾನದಿಂದ ಆಗಮಿಸಿದ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಕೆ.ಸಿ ವೇಣುಗೋಪಾಲ್, ರಣದೀಪ್ ಸುರ್ಜೇವಾಲ ಅವರನ್ನು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಂತರ ವಿಶೇಷ ವಿಮಾನದಲ್ಲಿ ಮೈಸೂರಿಗೆ ಆಗಮಿಸಿದ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬರಮಾಡಿಕೊಂಡರು.ಅಲ್ಲಿಂದ ಕಾರ್ಯಕ್ರಮ ನಡೆಯುವ ಮಹಾರಾಜ ಕಾರ್ಯಕ್ರಮಕ್ಕೆ ಆಗಮಿಸಿದರು
ರಾಹುಲ್ ಸಂವಾದ:
ರಾಜ್ಯದ ಕುಟುಂಬದ ಒಡತಿಗೆ ಪ್ರತಿ ತಿಂಗಳು ೨ ಸಾವಿರ ರೂಪಾಯಿ ಹಣ ನೀಡುವ ಗೃಹ ಲಕ್ಷ್ಮಿ ಯೋಜನೆಗೆ ರಾಹುಲ್ ಗಾಂಧಿ ಚಾಲನೆ ನೀಡಿದ ನಂತರ ರಾಜ್ಯದ ಹಲವು ಜಿಲ್ಲೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.
ಇದೇ ವೇಳೆ ಹಲವು ಮಹಿಳೆಯರು ರಾಜ್ಯ ಸರ್ಕಾರದ ಯೋಜನೆಗೆ ಮುಕ್ತಕಂಠದಿಂದ ಶ್ಲಾಘನೆ ವ್ಯಕ್ತಪಡಿಸಿದ್ದು, ಈ ಯೋಜನೆ ಜಾರಿಯಿಂದ ಗ್ರಾಮೀಣ ಪ್ರದೇಶದ ಅನೇಕ ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ರಾಹುಲ್ ಗಾಂಧಿ ಅವರು ರಾಜ್ಯದ ಫಲಾನುಭಿಗಳೊಂದಿದೆ ಸಂವಾದ ನಡೆಸುವ ಮೂಲಕ ನುಡಿದಂತೆ ನಡೆದಿದ್ದೇವೆ ಎನ್ನುವುದನ್ನು ಸಾಬೀತು ಪಡಿಸಿದ್ದಾರೆ

ಇಂದು ಬೆಳಿಗ್ಗೆ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿರವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯರವರು ಪುಷ್ಪಗುಚ್ಚ ನೀಡಿ ಸ್ವಾಗತಿಸಿದರು. ಸಿಎಂ ರಾಜಕೀಯ ಸಲಹೆಗಾರ ಗೋವಿಂದರಾಜು ಇದ್ದಾರೆ.
ದೇಶಕ್ಕೆ ಸಂದೇಶ ರವಾನೆ
ಕರ್ನಾಟಕ ವಿಧಾನಸಭೆ ಚುನಾವಣೆಯ ಅಭೂತಪೂರ್ವ ಗೆಲುವು ದೇಶಾದ್ಯಂತ ಕಾಂಗ್ರೆಸ್ ಪಕ್ಷಕ್ಕೆ ಫೀನಿಕ್ಸ್ ನಂತೆ ಎದ್ದು ಬರಲು ಅವಕಾಶ ನೀಡಿದ್ದು ಚುನಾವಣೆ ಸಮಯದಲ್ಲಿ ನೀಡಿದ್ದ ಐದು ಗ್ಯಾರಂಟಿಗಳಲ್ಲಿ ನಾಲ್ಕನೇ ಈಡೇರಿಸುವ ಮೂಲಕ ದೇಶಕ್ಕೆ ದೊಡ್ಡ ಸಂದೇಶ ರವಾನಿಸಿದೆ.
ಮುಂಬರುವ ರಾಜಸ್ತಾನ, ತೆಲಂಗಾಣ, ಮಧ್ಯ ಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಹಾಗು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೊಸ ಅಸ್ತ್ರ ಸಿಕ್ಕಂತಾಗಲಿದ್ದು ನಾವು ನುಡಿದಂತೆ ನಡೆದಿದ್ದೇವೆ ಎನ್ನುವುದನ್ನು ವಿವಿಧ ರಾಜ್ಯಗಳ ಚುನಾವಣೆಯಲ್ಲಿ ಜನರ ಮುಂದಿಟ್ಟು ಮನಗೆಲ್ಲಲು ಸಹಕಾರಿಯಾಗಿದೆ.
ರಾಜ್ಯಾದ್ಯಂತ ವೀಕ್ಷಣೆಗೆ ಅವಕಾಶ
ಗೃಹ ಲಕ್ಷ್ಮಿ ಯೋಜನೆಗೆ ಚಾಲನೆ ನೀಡುವ ಕಾರ್ಯಕ್ರಮನ್ನು ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವೀಕ್ಷಿಸಲು ಅನುವಾಗುವಂತೆ ಬೃಹತ್ ಪರದೆ ಹಾಕಿ ವ್ಯವಸ್ಥೆ ಮಾಡಲಾಗಿತ್ತು.
ಬೆಂಗಳೂರಿನಲ್ಲಿ ಬಿಬಿಎಂಪಿ ಅಧಿಕಾರಿಗಳು ಸೇರಿದಂತೆ ಆಯಾ ಜಿಲ್ಲೆಗಳಲ್ಲಿ ಜಿಲ್ಲಾಡಳಿತ ಕಾರ್ಯಕ್ರಮದ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು.
ಐತಿಹಾಸಿಕ ಯೋಜನೆ
ನಾಡಿನ ಕೋಟ್ಯಂತರ ತಾಯಂದಿರಿಗೆ “ಗೃಹಲಕ್ಷ್ಮಿ” ಯೋಜನೆಯಿಂದ ಸ್ವತಂತ್ರ, ಸ್ವಾವಲಂಬಿ ಬದುಕು ನಡೆಸಲು ಸಹಕಾರಿಯಾಗಲಿದೆ,ಇದೊಂದು ಐತಿಹಾಸಿಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವೈಯಕ್ತಿಕ ಆಸೆ, ಆಕಾಂಕ್ಷೆ, ಅವಶ್ಯಕತೆಗಳನ್ನು ತ್ಯಾಗಮಾಡಿ ಕುಟುಂಬಕ್ಕಾಗಿ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ಮನೆ ಯಜಮಾನಿಯ ಬ್ಯಾಂಕ್ ಖಾತೆಗೆ ೨೦೦೦ ರೂಪಾಯಿಗಳನ್ನು ನೇರವಾಗಿ ವರ್ಗಾವಣೆ ಮಾಡಿ ನುಡಿದಂತೆ ನಡೆದಿದೆ ಎಂದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೊಂದು ಐತಿಹಾಸಿಕ ದಿನ. ಈ ಹೊತ್ತಿನಲ್ಲಿ ನಾಡಿನ ತಾಯಂದಿರ ಮುಖದಲ್ಲಿ ಮೂಡುವ ನೆಮ್ಮದಿಯ ನಗೆ ಕಾಣುತ್ತಿರುವುದು ಖುಷಿ ಸಂಗತಿ ಎಂದಿದ್ದಾರೆ.
ಮಹಿಳೆಯರ ಸಬಲೀಕರಣದಿಂದ ಬಲಿಷ್ಠ ಸಮಾಜ ನಿರ್ಮಾಣ.ಮಹಿಳಾ ಸಮಾನತೆಯಿಂದ ಸಮ ಸಮಾಜ ಸ್ಥಾಪನೆಗೆ ಸಹಕಾರಿ ಎಂದು ತಿಳಿಸಿದ್ದಾರೆ