ಮನೆ-ಮನಗಳಲ್ಲಿಯೂ ಕನ್ನಡದ ಕಂಪಿರಲಿ

ವಿಜಯಪುರ.ನ೧೩: ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಮನೆ-ಮನೆಗಳಲ್ಲಿಯೂ ಕನ್ನಡದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸುತ್ತಮುತ್ತಲ ಜನಗಳನ್ನು ಸೇರಿಸಿ, ಎಲ್ಲರ ಮನಗಳಲ್ಲಿಯೂ ಕನ್ನಡ ನಾಡು-ನುಡಿಯ ಬಗ್ಗೆ ಜಾಗೃತಿ ಮೂಡಿಸುವಂತಹ ಕೆಲಸ ಮಾಡಬೇಕೆಂದು ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕ ದೇವರಾಜ್ ತಿಳಿಸಿದರು.
ಅವರು ಪಟ್ಟಣದ ಭರತ್ ನಗರದಲ್ಲಿರುವ ಗಾರೆ ಮೇಸ್ತ್ರಿ ಸುರೇಶ್‌ರವರ ಮನೆಯಲ್ಲಿ “ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮ”ದ ಅಡಿಯಲ್ಲಿ ಟೌನ್ ಕಸಾಪ ವತಿಯಿಂದ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಹಡಪದ್ ಮಾತನಾಡಿ, ಪ್ರಾಚೀನದ ಪಂಪ, ರನ್ನ, ಜನ್ನ, ಕುಮಾರವ್ಯಾಸ ಮುಂತಾದವರ ಕನ್ನಡ ಸೃಷ್ಟಿಯು ಕನ್ನಡ ಹೆಮ್ಮೆಯಾಗಿದ್ದರೆ, ೧೨ ನೇ ಶತಮಾನದ ಶರಣರು ರಚಿಸಿದ ಸರಳಗನ್ನಡದ ವಚನಗಳು ಹಾಗೂ ಬಾಯಿಂದ ಬಾಯಿಗೆ ಹಾಡಿಕೊಂಡು ಬಂದಿರುವ ಜನಪದಗಳು ಹೆಚ್ಚು ಪರಿಣಾಮಕಾರಿಯಾಗಿ, ಕನ್ನಡವನ್ನು ಪರಂಪರಾಗತವಾಗಿ ಪಸರಿಸುವಂತೆ ಪರಿಣಾಮಕಾರಿಯಾಗಿ ಮಾಡಿದೆ ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಟೌನ್ ಕಸಾಪ ಅಧ್ಯಕ್ಷ ಜೆ.ಆರ್.ಮುನಿವೀರಣ್ಣ ವಹಿಸಿ, ಮಾತನಾಡಿ, ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿ ಯೂ ಸಾಹಿತ್ಯ ಕಾರ್ಯಕ್ರಮ ಹಮ್ಮಿಕೊಳ್ಳುವ ಕೆಲಸ ಮಾಡಲಾಗುತ್ತಿದ್ದು, ಕನ್ನಡ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪರಿಷತ್ತಿನೊಂದಿಗೆ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಟೌನ್ ಕಸಾಪ ಕಾರ್ಯದರ್ಶಿ ಎನ್.ಸಿ.ಮುನಿವೆಂಕಟರಮಣಪ್ಪ, ತಾಲೂಕು ಕಾರ್ಯದರ್ಶಿ ಆರ್.ಮುನಿರಾಜು, ಜಿಲ್ಲಾ ಕಾರ್ಯದರ್ಶಿ ಡಾ||ಎಂ.ಶಿವಕುಮಾರ್‌ರವರುಗಳು ಉಪಸ್ಥಿತರಿದ್ದರು.
ಗಾರೆ ಮೇಸ್ತ್ರಿ ಸುರೇಶ್ ಹಾಗೂ ಪತ್ನಿ ಅಶ್ವಿನಿ ದಂಪತಿಗಳನ್ನು ಕಸಾಪ ವತಿಯಿಂದ ಸನ್ಮಾನಿಸಲಾಯಿತು.
ಸಂಗೀತ ನಿರ್ದೇಶಕ ಎಂ.ವಿ.ನಾಯ್ಡುರವರ ಸಂಗೀತ ನಿರ್ದೇಶನದಲ್ಲಿ ಘಂಟಸಾಲ ಖ್ಯಾತಿಯ ಟಿ.ಮಹಾತ್ಮಾಂಜನೇಯ ನರಸಿಂಹಪ್ಪರವರುಗಳು ಕನ್ನಡ ಗೀತೆಗಳನ್ನು ಹಾಡಿದರು. ಜೆ.ಎಸ್.ನಾಗರಾಜ್ ತಬಲಾ ನುಡಿಸಿದರು.