ಮನೆ ಬಾಡಿಗೆ ಹಣದ ವಿಚಾರದಲ್ಲಿ ಜಗಳ ತಂದೆ-ಮಗ ಕೊಲೆ

ಬೆಂಗಳೂರು,ಏ.೭- ಬಾಡಿಗೆ ಮನೆಯ ಗುತ್ತಿಗೆ ಹಣದ ವಿಚಾರದಲ್ಲಿ ಮಾರಕಾಸ್ತ್ರಗಳಿಂದ ಅಣ್ಣ-ತಮ್ಮನ ನಡುವೆ ನಡೆದ ಹೊಡೆದಾಟದಲ್ಲಿ ಇಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಶ್ರೀರಾಮನಗರದಲ್ಲಿ ತಡರಾತ್ರಿ ಘಟನೆ ನಡೆದಿದೆ.
ಶ್ರೀರಾಮನಗರ ಬಡಾವಣೆಯ ಸೀನಪ್ಪ ಎಂಬುವರ ಮಕ್ಕಳಾದ ಅಶ್ವಥ್ ನಾರಾಯಣ ಮತ್ತು ಆಂಜಪ್ಪ ನಡುವೆ ನಡೆದ ಮಾರಾಮಾರಿಯಲ್ಲಿ, ಆಂಜಪ್ಪ (೪೫) ಹಾಗೂ ಅವರ ಮಗ ವಿಷ್ಣು (೧೮) ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಶ್ವಥ್ ನಾರಾಯಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ
ಶ್ರೀರಾಮನಗರದ ಸೀನಪ್ಪ ಹಾಗೂ ಸರೋಜಮ್ಮ ಎಂಬವರಿಗೆ ಅಶ್ವಥ್ ನಾರಾಯಣ್ ಎಂಬ ಹಿರಿ ಮಗ ಹಾಗೂ ಅಂಜಿನಪ್ಪ ಎಂಬ ಕಿರಿ ಮಗ ಸೇರಿ ೬ ಮಂದಿ ಗಂಡು ಮಕ್ಕಳು ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದರು.
ಹಿರಿಯ ಮಗ ಅಶ್ವಥ್ ನಾರಾಯಣ್ ಶ್ರೀರಾಮನಗರದಲ್ಲಿ ವಾಸವಾಗಿದ್ದರೆ ತಮ್ಮ ಅಂಜಿನಪ್ಪ ಬೆಂಗಳೂರಿನಲ್ಲಿ ವಾಸವಾಗಿದ್ದ. ಇತ್ತ ಇವರ ತಂದೆ-ತಾಯಿ ಚಿಂತಾಮಣಿಯಲ್ಲಿ ವಾಸವಾಗಿದ್ದರು ತಂದೆ ಸೀನಪ್ಪ ಸಂಪಾದನೆ ಮಾಡಿ ಕಟ್ಟಿಸಿದ್ದ ಬಾಡಿಗೆ ಮನೆಗಳಿಂದ ಬರುತ್ತಿದ್ದ ಹಣವನ್ನ ಅಶ್ವಥ್ ನಾರಾಯಣ್ ಮಾತ್ರ ಪಡೆದುಕೊಳ್ಳುತ್ತಿದ್ದ.
ಬಾಡಿಗೆ ಹಣ ಪಡೆಯುತ್ತಿದ್ದ ಅಶ್ವಥ್‌ನಾರಾಯಣ್ ತಂದೆ-ತಾಯಿಯನ್ನ ಸಹ ಚೆನ್ನಾಗಿ ನೋಡಿ ಕೊಳ್ಳುತ್ತಿರಲಿಲ್ಲವಂತೆ. ಈ ವಿಚಾರವಾಗಿ ನಿನ್ನೆ ಅಣ್ಣ ಅಶ್ವಥ್ ನಾರಾಯಣ್ ಹಾಗೂ ತಮ್ಮ ಅಂಜಿನಪ್ಪ ಪೊಲೀಸ್ ಠಾಣೆಗೆ ಹೋಗಿ ಬಂದಿದ್ದಾರೆ.
ತಡರಾತ್ರಿ ಇದೇ ವಿಚಾರವಾಗಿ ಅಶ್ವಥ್ ನಾರಾಯಣ್ ಹಾಗೂ ವಿಷ್ಣು, ಅಂಜಿನಪ್ಪ ಜೊತೆ ಮಾತನಾಡಲು ತಾಯಿ ಸರೋಜಮ್ಮ ಮನೆ ಬಳಿ ತೆರಳಿದ್ದಾಗ ಮಾತಿಗೆ ಮಾತು ಬೆಳೆದು ಮಚ್ಚು, ಚಾಕುವಿನಿಂದ ಹೊಡೆದಾಡಿಕೊಂಡಿದ್ದಾರೆ.
ಪರಿಣಾಮ ಅಂಜಿನಪ್ಪ ಹಾಗೂ ವಿಷ್ಣು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಅಶ್ವಥ್ ನಾರಾಯಣ್ ಸಹ ಗಂಭೀರವಾಗಿ ಗಾಯಗೊಂಡಿದ್ದು, ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಅಂಜಿನಪ್ಪಗೆ ಮೂರು ಜನ ಗಂಡು ಮಕ್ಕಳಿದ್ದರು ಅಶ್ವಥ್ ನಾರಾಯಣ್ ಗೆ ಮೂರು ಜನ ಹೆಣ್ಣು ಮಕ್ಕಳು. ಹೀಗಾಗಿ ಅಂಜಿನಪ್ಪನ ಮಗ ವಿಷ್ಣು ಎಂಬಾತನನ್ನು ಹುಟ್ಟಿದಾಗಲೇ ಅಶ್ವಥ್ ನಾರಾಯಣ್ ದತ್ತು ಪಡೆದುಕೊಂಡಿದ್ದರು.
ಚಿಂತಾಮಣಿ ನಗರ ಠಾಣೆಯಲ್ಲಿ ಪರ ವಿರೋಧ ಪ್ರಕರಣಗಳು ದಾಖಲಾಗಿವೆ.