ಮನೆ ಬಾಗಿಲಿಗೆ ಶಾಲೆ ವಾಹನಕ್ಕೆ ಚಾಲನೆ


ಬೆಂಗಳೂರು, ಸೆ.೧೨- ಬೆಂಗಳೂರಿನ ಅಂಗನವಾಡಿ ಮಕ್ಕಳಿಗೆ ವಿಧ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಫ್ರೀಥಿಂಕಿಂಗ್ ಫೌಂಡೇಶನ್ ಸಂಸ್ಥೆಯ ನೇತೃತ್ವದಲ್ಲಿ ಮನೆ ಬಾಗಿಲಿಗೆ ಶಾಲೆ ವಾಹನಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.
ನಗರದಲ್ಲಿಂದು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಪಾಲಿಕೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಭಾಗಿತ್ವದಲ್ಲಿ ವಂಡರ್ ಆನ್ ವೀಲ್ಸ್”(ಮನೆ ಬಾಗಿಲಿಗೆ ಶಾಲೆ) ವಾಹನಕ್ಕೆ ಚಾಲನೆ ದೊರೆಯಿತು.
ಬಿಬಿಎಂಪಿ ವತಿಯಿಂದ ಈಗಾಗಲೇ ಎಲ್ಲಾ ವಲಯಗಳಲ್ಲೂ ೧೦ ಬಸ್ಸುಗಳಲ್ಲಿ ವಾಹನಗಳ ಮೂಲಕ ಶಾಲೆಗಳಿಂದ ಹೊರಗುಳಿದ ಮಕ್ಕಳಿಗೆ ವಿದ್ಯಾಭ್ಯಾಸ ನೀಡಲಾಗುತ್ತಿದೆ. ಈಗ ಫ್ರೀಥಿಂಕಿಂಗ್ ಫೌಂಡೇಷನ್ ಸಂಸ್ಥೆ ಸಹಭಾಗಿತ್ವದಲ್ಲಿ ವಿಶ್ವದ ಮೊದಲ ಮಾಂಟೆಸ್ಸರಿ ಸ್ಕೂಲ್ ಆನ್ ವೀಲ್ಸ್ ಅನ್ನು ದಕ್ಷಿಣ ವಲಯ ವ್ಯಾಪ್ತಿಯಲ್ಲಿ ಮೊದಲ ಮಾಂಟೆಸ್ಸರಿ ವೀಲ್ಸ್ ಶಾಲೆಯನ್ನು ಪ್ರಾರಂಭಿಸಲಾಗಿದೆ.
ಮಕ್ಕಳಿಗೆ ಮಾಂಟೆಸ್ಸರಿ ವಿಧಾನದಲ್ಲಿ ಬೋಧನೆ ಮಾಡಲು ಶಿಕ್ಷಕರಿಗೆ ತರಬೇತಿಯನ್ನು ಸಹ ನೀಡಲಾಗಿರುತ್ತದೆ. ಇದರ ಉದ್ದೇಶ ಬೆಂಗಳೂರಿನ ಕೊಳೆಗೇರಿಗಳಲ್ಲಿ ವಾಸಿಸುವ ೨.೫ ರಿಂದ ೬ ವರ್ಷ ವಯಸ್ಸಿನ ಅಂಚಿನಲ್ಲಿರುವ ಮಕ್ಕಳ ಆರಂಭಿಕ ಕಲಿಕೆಯನ್ನು ಮನೆ ಬಾಗಿಲಿಗೆ ಕೊಂಡೊಯ್ಯುವ ಕಾರ್ಯಕ್ರಮವಾಗಿದೆ.
ವಾಹನದಲ್ಲಿ ಇಬ್ಬರು ಶಿಕ್ಷಕಿಯರು, ಓರ್ವ ಗ್ರೂಪ್ ಡಿ ನೌಕರ, ಬಿಳಿ ಹಲಗೆ(ವೈಟ್ ಬೋರ್ಡ್), ಮಕ್ಕಳ ಸ್ನೇಹಿ ಚಿತ್ರಗಳ ಅಳವಡಿಕೆ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಸೌಲಭ್ಯಗಳು ಇರಲಿವೆ.
ಈ ವೇಳೆ ಬಿಬಿಎಂಪಿ ವಿಶೇಷ ಆಯುಕ್ತರು(ಶಿಕ್ಷಣ) ಡಾ.ರಾಮ್ ಪ್ರಸಾತ್ ಮನೋಹರ್, ಪಾಲಿಕೆ ಶಿಕ್ಷಣ ವಿಭಾಗದ ಸಹಾಯಕ ಆಯುಕ್ತ ಉಮೇಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕಿ ಉಷಾ, ಫ್ರೀಥಿಂಕಿಂಗ್ ಫೌಂಡೇಶನ್ ಸಂಸ್ಥೆಯ ಮುಖ್ಯಸ್ಥ ಸುನೋಜ್ ಫಿಲಿಫ್ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.