ಮನೆ ಬಾಗಿಲಿಗೆ ಶಾಲೆ ಬಿಬಿಎಂಪಿ ಯೋಜನೆಗೆ ಚಾಲನೆ


ಬೆಂಗಳೂರು, ಏ.೧-ಬಡ ಮಕ್ಕಳನ್ನು ಸುಶಿಕ್ಷಿತರನ್ನಾಗಿಸುವ ಉದ್ದೇಶದಿಂದಾಗಿ ಬಿಬಿಎಂಪಿ ಜಾರಿಗೊಳಿಸಿರುವ ‘ಮನೆ ಬಾಗಿಲಿಗೆ ಶಾಲೆ’ ವಿನೂತನ ಯೋಜನೆ ಕಾರ್ಯ ರೂಪಕ್ಕೆ ಬಂದಿದ್ದು, ಚಿಣ್ಣರ ಮೆಚ್ಚುಗೆಗೆ ಈ ಬಸ್ ಪಾತ್ರವಾಗಿದೆ.
ಬಿಎಂಟಿಸಿ ಸಂಸ್ಥೆಯ ಹಳೇ ಬಸ್ಸುಗಳನ್ನು ತಲಾ ೪ ಲಕ್ಷ ರೂ.ಗಳಂತೆ ೧೦ ಬಸ್ಸುಗಳನ್ನು ಖರೀದಿ ಮಾಡಿರುವ ಪಾಲಿಕೆ, ಈ ಬಸ್ಸುಗಳನ್ನು ಪುಟ್ಟ ಶಾಲೆಯಂತೆ ಪರಿವರ್ತನೆ ಮಾಡಿದ್ದು, ಗುರುವಾರ ಇಲ್ಲಿನ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿ ನಿಲ್ಲಿಸಿದ್ದ ಬಸ್ಸಿನಲ್ಲಿ ಮಗುವೊಂದು ಶಿಕ್ಷಣದ ಪ್ರಯಾಣ ಬೆಳೆಸಿದ ನೋಡಗರ ಗಮನ ಸೆಳೆಯಿತು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುವ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ಸಲುವಾಗಿ ‘ಮನೆ ಬಾಗಿಲಿಗೆ ಶಾಲೆ’ ಕಾರ್ಯಕ್ರಮವನ್ನು ರೂಪಿಸಲಾಗಿದೆ. ಈ ಬಸ್‌ಗಳನ್ನು ಶಾಲೆಯನ್ನಾಗಿ ಪರಿವರ್ತಿಸಿ ವಿದ್ಯಾಭ್ಯಾಸ ನೀಡಲು ಬಳಸಲಾಗುತ್ತದೆ. ಈ ಸಂಬಂಧ ಅವುಗಳಿಗೆ ಹೊಸ ರೂಪ ನೀಡಲಾಗಿದೆ.
ಇನ್ನು, ಪಾಲಿಕೆ ವತಿಯಿಂದಲೇ ಶಿಕ್ಷಕರು ಹಾಗೂ ಚಾಲಕರನ್ನು ನೇಮಕ ಮಾಡಲಾಗುತ್ತದೆ. ಹೆಚ್ಚು ಮಕ್ಕಳಿರುವ ಕೊಳೆಗೇರಿಗಳನ್ನು ಗುರುತಿಸಿ ಅಲ್ಲಿಗೆ ಬಸ್‌ಗಳನ್ನು ಕಳುಹಿಸಲಾಗುತ್ತದೆ. ಮಕ್ಕಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದು ಬಿಬಿಎಂಪಿ ನಿರ್ಗಮಿತ ಆಯುಕ್ತ ಮಂಜುನಾಥ ಪ್ರಸಾದ್ ತಿಳಿಸಿದರು.
ಚಾಲಕರ-ಶಿಕ್ಷಕರ ಹುಡುಕಾಟ: ಶೀಘ್ರದಲ್ಲಿಯೇ ಆರಂಭವಾಗುವ ಈ ಬಸ್‌ಗಳಿಗೆ ಬಿಬಿಎಂಪಿ ವತಿಯಿಂದಲೇ ಚಾಲಕರು ಹಾಗೂ ಶಿಕ್ಷಕ ವೃಂದವನ್ನು ನೇಮಕ ಮಾಡಲು ಪಾಲಿಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ನೇಮಕಾತಿ ಪ್ರಕ್ರಿಯೆ ಚುರುಕುಗೊಂಡಿದ್ದು, ಶೀಘ್ರದಲ್ಲೇ ಪ್ರಕಟಣೆ ಹೊರಬೀಳಲಿದೆ ಎನ್ನುತ್ತಾರೆ ಪಾಲಿಕೆ ಅಧಿಕಾರಿಗಳು.
ಇನ್ನು, ಮುಖ್ಯವಾಗಿ ಕಟ್ಟಡ ಕಾರ್ಮಿಕರ ಮಕ್ಕಳು, ಭಿಕ್ಷಾಟನೆಗೆ ಗುರಿಯಾಗಿರುವ ಮಕ್ಕಳ, ಕೊಳಗೇರಿ ಪ್ರದೇಶ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಶಿಕ್ಷಣದಿಂದ ವಂಚಿತರಾಗಿರುವ ಮಕ್ಕಳನ್ನು ಸೆಳೆಯಲು ಬಿಬಿಎಂಪಿ ಗುರಿಯಿಟ್ಟುಕೊಂಡಿದ್ದು, ಬಸ್ಸಿನಲ್ಲಿಯೇ ಮಕ್ಕಳ ಶಿಕ್ಷಣ ಸಾಗಲಿದೆ.
ಬಸ್ಸಿನಲ್ಲಿ ಏನಿದೆ?
ಇದರಲ್ಲಿ ವಿದ್ಯಾರ್ಥಿಗಳು ಕುಳಿತುಕೊಳ್ಳುಲು ಆಸನ, ಬರೆಯಲು ದೊಡ್ಡ ಗಾತ್ರದ ಬಿಳಿ ಫಲಕ, ದೀಪಗಳನ್ನು ಅಳವಡಿಸಲಾಗಿದೆ. ಜತೆಗೆ ಕುಡಿಯುವ ನೀರಿನ ವ್ಯವಸ್ಥೆಯೂ ಮಾಡಲಾಗಿದ್ದು, ಮಕ್ಕಳ ಗಮನ ಇತ್ತ ಸೆಳೆಯುವಂತೆ ಮಾಡಲಾಗಿದೆ.