ಮನೆ ಬಾಗಿಲಿಗೆ ಬಂದ ಗಾಡಿಗೆ ಕಸ ನೀಡಿ, ಸ್ವಚ್ಛತೆಗೆ ಸಹಕರಿಸಿ

ದಾವಣಗೆರೆ.ಜು.೧೭: ಮಳೆಗಾಲದಲ್ಲಿ ರೋಗ ರುಜಿನ ಹೆಚ್ಚಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ತಮ್ಮ‌‌ ಮನೆ ಬಾಗಿಲಿಗೆ ಬರುವ ಕಸ ಸಂಗ್ರಹಣ ವಾಹನಗಳಿಗೆ ಹಾಕುವ ಮೂಲಕ ಸಹಕರಿಸಿ. ಮನೆಯ ಹಸಿ-ಒಣ ಕಸವನ್ನು ನಿಗದಿತ ದಿನಗಳಂದು ನೀಡುವ ಮೂಲಕ ಊರಿನ ಸ್ವಚ್ಛತೆ ಕಾಪಾಡಿ ಎಂದು ಮಾಜಿ ಮೇಯರ್ ಹಾಗೂ 32ನೇ ವಾರ್ಡ್‌ನ ಪಾಲಿಕೆ ಸದಸ್ಯೆ ಡಿ.ಎಸ್.ಉಮಾ ಪ್ರಕಾಶ್ ಮನವಿ ಮಾಡಿದ್ದಾರೆ.ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಪಾಲಿಕೆ ವ್ಯಾಪ್ತಿಯ ಎಲ್ಲಾ 45 ವಾರ್ಡ್‌ಗಳಲ್ಲೂ ಮನೆ ಮನೆ ಬಾಗಿಲಿಗೆ, ಅಂಗಡಿ ಮುಂಗ್ಗಟ್ಟುಗಳ ಬಾಗಿಲಿಗೆ ಕಸ ಸಂಗ್ರಹಣಾ ವಾಹನ ಬರುತ್ತಿವೆ. ಆದರೂ, ತಮ್ಮ ಮನೆ ಕಸ, ಮನೆ ಮುಂಭಾಗ ಶೇಖರಣೆಯಾಗುವ ಕಸವನ್ನು ಕಸದ ಗಾಡಿಗೆ ನೀಡದೇ, ರಾತ್ರೋರಾತ್ರಿಖಾಲಿ ರಸ್ತೆ, ನಿವೇಶನ, ನಿರ್ಜನ ಪ್ರದೇಶ, ಚರಂಡಿ, ದೊಡ್ಡ ಚರಂಡಿ, ತಿಪ್ಪೆಗಳಲ್ಲಿ ಕೆಲವರು ಸುರಿಯುತ್ತಿರುವುದರಿಂದ ಸ್ವಚ್ಛತೆಗೆ ಸಮಸ್ಯೆಯಾಗಿದೆ. ಇದು ಪಾಲಿಕೆಗೆ, ಪೌರ ಕಾರ್ಮಿಕರಿಗೆ ಸವಾಲಾಗಿದೆ ಎಂದು ಹೇಳಿದ್ದಾರೆ.ಕೋಳಿ, ಕುರಿ ಮಾಂಸದ ತ್ಯಾಜ್ಯ, ಕೋಳಿ ಪುಕ್ಕಗಳು, ಹೇರ್ ಸಲೂನ್‌ಗಳ ತ್ಯಾಜ್ಯ, ಹೊಟೆಲ್‌ಗಳ ಅಳಿದುಳಿದ ಆಹಾರ ಪದಾರ್ಥ, ಮುಸುರಿಯನ್ನು ರಾತ್ರೋರಾತ್ರಿ ಸುರಿದು ಹೋಗುತ್ತಿದ್ದಾರೆ. ಅಲ್ಲಲ್ಲಿ ಎಂಜಲು ಎಲೆ, ಪ್ಲೇಟ್‌ಗಳನ್ನುಬಿಸಾಡುತ್ತಿರುವುದು ಸ್ವಚ್ಛತಾ ಕಾರ್ಯಕ್ಕೆ ಸವಾಲು ಆಗಿದೆ. ಮನೆ ಕಸ ಸಂಗ್ರಹಕ್ಕೆ ಕಸ ಸಂಗ್ರಹದ ಆಟೋ ಬಂದರೆ, ವಾಣಿಜ್ಯ ಅಂಗಡಿಗಳು, ಹೊಟೆಲ್, ರೆಸ್ಟೋರೆಂಟ್ ತ್ಯಾಜ್ಯ ಸಂಗ್ರಹಿಸಲು ವಾಹನ ವ್ಯವಸ್ಥೆ ಪಾಲಿಕೆ ಮಾಡಿದೆ. ಪ್ರತಿಯೊಬ್ಬರೂ ಸ್ವಚ್ಛತೆಗೆ ಕೈ ಜೋಡಿಸಿ, ಮನೆ, ಅಂಗಡಿ, ಹೊಟೆಲ್ ಬಳಿ ಬರುವ ಪಾಲಿಕೆ ವಾಹನಕ್ಕೆ ತ್ಯಾಜ್ಯ ನೀಡಿ, ಸ್ವಚ್ಛತೆ, ಜನಾರೋಗ್ಯ ಕಾಪಾಡಲು ಸಹಕರಿಸಬೇಕು ಎಂದು ಅವರು ಹೇಳಿದ್ದಾರೆ.ಪಾಲಿಕೆ ಕಸದ ಗಾಡಿ ಮನೆ ಬಾಗಿಲಿಗೆ ಬಂದಾಗ ಅಲ್ಲಿ ಸಂಗ್ರಹಿಸಿದ ಕಸವನ್ನು ಸಣ್ಣ ಕಸದ ವಾಹನಗಳು ಕೊಂಡೊಯ್ದು, ದೊಡ್ಡ ದೊಡ್ಡ ಕಾಂಪ್ಯಾಕ್ಟರ್ ವಾಹನಗಳಿಗೆ ಅನ್‌ಲೋಡ್ ಮಾಡಿ ಬರಬೇಕು. ಕಾಂಪ್ಯಾಕ್ಟರ್ ಗಾಡಿಗಳು ಸಣ್ಣ ಸಣ್ಣ ಗಾಡಿಗಳಿಂದ ಪಡೆದ ಕಸವನ್ನು ಆವರಗೊಳ್ಳ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಹೋಗಿ, ಆನ್‌ಲೋಡ್ ಮಾಡಿ ಬರಲು ತಡವಾಗುತ್ತದೆ. ಹಾಗಾಗಿ ನಿತ್ಯವೂ ಬೆಳಿಗ್ಗೆ 6. 30ರಿಂದಲೇ ಎಲ್ಲಾ ವಾರ್ಡ್‌ಗಳ ಕಸ ಸಂಗ್ರಹಣಾ ವಾಹನಗಳ ಕಾರ್ಯ ಶುರುವಾಗುತ್ತದೆ. ಕೆಲ ಕಡೆ ಕಸದ ಗಾಡಿ ಬಂದರೂ ಜನರು ಕಸ ಹಾಕಲು ಬರುತ್ತಿಲ್ಲ. ಇಂತಹವರು ರಸ್ತೆ ಬದಿ, ನಿರ್ಜನ ಪ್ರದೇಶ, ಚರಂಡಿ, ಡ್ರೈನೇಜ್‌ಗಳಲ್ಲಿ ಸುರಿಯುತ್ತಿರುವುದು ಸರಿಯಲ್ಲ ಎಂದಿದ್ದಾರೆ.ಅಳಿದುಳಿದ ಆಹಾರ ಪದಾರ್ಥ, ಮುಸುರಿ, ಹಣ್ಣು, ತರಕಾರಿ ಸುರಿಯುವುದರಿಂದ ಹಂದಿಗಳು, ಬೀದಿ ನಾಯಿಗಳು, ಇಲಿ, ಹೆಗ್ಗಣಗಳ ಹಾವಳಿಯೂ ಹೆಚ್ಚಾಗುತ್ತದೆ. ಅವುಗಳಿಗೆ ಆಹಾರ ಸಿಗುತ್ತೆ ಎಂಬುದು ಖಾತರಿಯಾದರೆ ಅದೇ ಭಾಗದ ಸುತ್ತಮುತ್ತಲಲ್ಲಿ ವಾಸ ಶುರು ಮಾಡುತ್ತವೆ. ಇದರಿಂದ ಆ ಭಾಗದ ಜನಾರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಈ ಹಿನ್ನೆಲೆಯಲ್ಲಿ ನಿತ್ಯ ಬೆಳಿಗ್ಗೆ ಕಸದ ಗಾಡಿಗೆ ಮನೆ ಕಸ ಹಾಕಿ, ಮಹಾ ನಗರದ ಸ್ವಚ್ಛತೆಗೆ ಸಹಕರಿಸಬೇಕು. ಸುಶಿಕ್ಷಿತರ ಬಡಾವಣೆ, ಕೆಲ ನಾಗರೀಕರು, ನಿವೃತ್ತರು ಅನಿಸಿಕೊಂಡವರೇ ಮನೆ ಮುಂದೆ ಬಂದ ಕಸದ ಗಾಡಿಗೆ ಕಲ ಹಾಕದೇ, ರಾತ್ರೋರಾತ್ರಿ ಹಾದಿ ಬೀದಿ, ನಿವೇಶನ, ನಿರ್ಜನ ಪ್ರದೇಶದಲ್ಲಿ ಕಸ ಹಾಕುವುದು ಸರಿಯಲ್ಲ. ಇನ್ನೂ ಕೆಲ ಸುಶಿಕ್ಷಿತರು ತಮ್ಮ ದ್ವಿಚಕ್ರ ವಾಹನ, ಕಾರುಗಳಲ್ಲಿ  ಬಂದು, ಕಸ ಹಾಕಿ ಹೋಗುವುದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ಸಮಸ್ಯೆ ಉಂಟು ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಡಿ. ಎಸ್. ಉಮಾ ಪ್ರಕಾಶ ಕಿವಿಮಾತು ಹೇಳಿದ್ದಾರೆ.