ಮನೆ ಬಾಗಿಲಿಗೆ ಪರಿಹಾರ ಕೊಂಡೊಯ್ದ ತಹಶೀಲ್ದಾರ್

ಅರಸೀಕೆರೆ, ಜು. ೧೫- ಸರ್ಕಾರ ನೀಡುವ ಪರಿಹಾರವನ್ನು ಪಡೆಯಲು ಫಲಾನುಭವಿ ಅನೇಕ ಬಾರಿ ಕಚೇರಿಗಳ ಬಾಗಿಲಿಗೆ ಎಡತಾಗುವುದು ಸಾಮಾನ್ಯ. ಆದರೆ ಇಲ್ಲಿನ ತಹಶೀಲ್ದಾರ್ ಇದಕ್ಕೆ ಭಿನ್ನವಾಗಿದ್ದಾರೆ.
ಮುಂಗಾರಿನ ಅತಿವೃಷ್ಟಿ ಮಳೆಯಲ್ಲಿ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡುವ ಸರ್ಕಾರದ ಯೋಜನೆಯನ್ನು ತಹಶೀಲ್ದಾರ್ ವಿದ್ಯಾ ರಾಥೋಡ್ ಫಲಾನುಭವಿಗಳ ಮನೆ ಬಾಗಿಲಿಗೆ ತೆರಳಿ ಕಾರ್ಯಗತಗೊಳಿಸಿದರು.
ಕಸಬಾ ಹೋಬಳಿಯಲ್ಲಿ ಬಸವನ ಹಟ್ಟಿ ಕಮಲಮ್ಮ ಕೋಂ ರಾಮಭೋವಿ ಅವರ ಮನೆಗೆ ತೆರಳಿ ೧೦ ಸಾವಿರ ರೂ.ಗಳ ಚೆಕ್ ನೀಡಿದರು. ಮುರುಂಡಿ ಸಿದ್ದರಹಟ್ಟಿಯಲ್ಲಿನ ಫಲಾನುಭವಿ ಮನೆ ಬಾಗಿಲಿಗೆ ತೆರಳಿ ಪರಿಹಾರ ವಿತರಿಸಿದರು.
ನಂತರ ಮಾತನಾಡಿದ ಅವರು, ಅತಿವೃಷ್ಟಿಯಲ್ಲಿ ಹಾನಿಗೊಳಗಾದ ಫಲಾನುಭವಿಗಳಿಗೆ ತುರ್ತಾಗಿ ಅವರ ಜೀವನಕ್ಕೆ ಅನುವಾಗುವಂತೆ ೧೦ ಸಾವಿರ ರೂ.ಗಳನ್ನು ಕೂಡಲೇ ನೀಡಬೇಕೆಂಬ ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ನಾವು ಹಾನಿಗೊಳಗಾದ ಮನೆಗಳಿಗೆ ತೆರಳಿ ಚೆಕ್ ನೀಡುತ್ತಿದ್ದೇವೆ ಎಂದು ಹೇಳಿದರು.
ಈ ತಿಂಗಳು ೨೦ ಅಧಿಕ ಮನೆಗಳು ಹಾನಿಯಾಗಿದೆ. ಇನ್ನು ಮಳೆ ಬರುತ್ತಲೇ ಇರುವುದರಿಂದ ನಿತ್ಯ ಒಂದು ಎರಡು ಮನವಿಗಳು ಬರುತ್ತಿದೆ. ಪರಿಹಾರ ನೀಡುವಲ್ಲಿ ತುರ್ತಾಗಿ ಕಾರ್ಯ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.
ಮೂರು ದಿನಗಳಲ್ಲಿ ಕುಟುಂಬಕ್ಕೆ ಹಾನಿಯಾಗಿರುವ ಮೌಲ್ಯದ ಸಮೀಕ್ಷೆಯನ್ನು ನಡೆಸಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುತ್ತಿದೆ. ಇದು ತಾತ್ಕಾಲಿಕ ಪರಿಹಾರವಾಗಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ಪ್ರಭಾರ ರಾಜಸ್ವ ನಿರೀಕ್ಷಕ ಶಿವಾನಂದ ನಾಯಕ್, ಪ್ರಕೃತಿ ವಿಕೋಪ ಶಾಖೆಯ ವಿಷಯ ನಿರ್ವಹಣಾ ಲೋಕೇಶ್ ಮತ್ತಿತರರು ಉಪಸ್ಥಿತರಿದ್ದರು.