ಮನೆ ಬಾಗಿಲಿಗೆ ಪಡಿತರ ವಿತರಣೆ: ಪಂಜಾಬ್ ಸಿಎಂ ಘೋಷಣೆ

ಚಂಡೀಗಢ, ಮಾ.29-ಒಬ್ಬ ಶಾಸಕರಿಗೆ ಒಂದೇ ಬಾರಿ ಪಿಂಚಣಿ’ ಯೋಜನೆ ಜಾರಿ ಬಳಿಕ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತೊಂದು ಮಹತ್ವದ ಯೋಜನೆ ಜಾರಿಗೆ ಮುಂದಾಗಿದ್ದು, ಮನೆ ಬಾಗಿಲಿಗೆ ಪಡಿತರ ವಿತರಣೆ ಯೋಜನೆಯನ್ನು ಇಂದು ಘೋಷಿಸಿದ್ದಾರೆ.

ಉತ್ತಮ ಗುಣಮಟ್ಟದ ಪಡಿತರವನ್ನು ಅವರ ಮನೆ ಬಾಗಿಲಿಗೆ ತಲುಪಿಸುವುದರಿಂದ ಬಡವರು ಇನ್ನು ಮುಂದೆ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ಹೇಳಿದರು. ಆದಾಗ್ಯೂ, ಅರ್ಹ ಫಲಾನುಭವಿಗಳಿಗೆ ಯೋಜನೆಯು ಅವರಿಚ್ಚೆಯ ಆಯ್ಕೆಯಾಗಿರುತ್ತದೆ ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ. ಈ ಯೋಜನೆಯ ವಿವರಗಳನ್ನು ಶೀಘ್ರದಲ್ಲೇ ವಿವರಿಸಲಾಗುತ್ತದೆ ಎಂದಿದ್ದಾರೆ.

ಈ ಯೋಜನೆಯಡಿ ಉತ್ತಮ ಗುಣಮಟ್ಟದ ಪಡಿತರ ಸಾಮಗ್ರಿಗಳನ್ನು ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸಲಾಗುವುದು ಮತ್ತು ಇದಕ್ಕಾಗಿ ಯಾರೂ ಸರತಿ ಸಾಲಿನಲ್ಲಿ ನಿಲ್ಲುವ ಅಥವಾ ಪರಿತರ ತರುವುದಕ್ಕಾಗಿ ತಮ್ಮ ಕೆಲಸ ಬಿಟ್ಟು ಬರುವ ಅಗತ್ಯವಿಲ್ಲ ಎಂದು ಅವರು ಹೇಳಿದರು. “ನಮ್ಮ ಅಧಿಕಾರಿಗಳು ಫಲಾನುಭವಿಗಳಿಗೆ ಫೋನ್ ಕರೆ ಮಾಡುತ್ತಾರೆ ಮತ್ತು ಅವರ ಅನುಕೂಲ ಮತ್ತು ಲಭ್ಯತೆಗೆ ಅನುಗುಣವಾಗಿ ಪಡಿತರವನ್ನು ಅವರ ಮನೆಗಳಿಗೆ ತಲುಪಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದರು.

ಅರವಿಂದ್ ಕೇಜ್ರಿವಾಲ್ ಸರ್ಕಾರವು ದೆಹಲಿಯಲ್ಲೂ ಈ ಯೋಜನೆಯನ್ನು ಪ್ರಾರಂಭಿಸಿದೆ. ಆದರೆ ದುರದೃಷ್ಟವಶಾತ್ ಅದನ್ನು ನಿಲ್ಲಿಸಲಾಯಿತು. ಆದರೆ ಪಂಜಾಬ್‌ನಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಿದ್ದೇವೆ ಹಾಗೂ ಯಶಸ್ವಿಯಾಗಿ ನಡೆಸುತ್ತೇವೆ ಎಂದು ಸಿಎಂ ಹೇಳಿದರು.

ಡಿಜಿಟಲೀಕರಣದ ಈ ಯುಗದಲ್ಲಿ ಆಹಾರ ಪದಾರ್ಥಗಳು ಸೇರಿದಂತೆ ದೈನಂದಿನ ಅಗತ್ಯದ ವಿವಿಧ ವಸ್ತುಗಳನ್ನು ಒಂದೇ ಫೋನ್ ಕರೆಯಲ್ಲಿ ಜನರ ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ. ಆದರೆ ಅನೇಕ ಸಂದರ್ಭಗಳಲ್ಲಿ, ಬಡವರು, ಅವರಲ್ಲಿ ಹೆಚ್ಚಿನವರು ದಿನಗೂಲಿಗಳು, ಪಡಿತರವನ್ನು ತೆಗೆದುಕೊಳ್ಳಲು ತಮ್ಮ ದಿನದ ಕೆಲಸವನ್ನು ಬಿಟ್ಟು ಬರಬೇಕಾಗುತ್ತದೆ . ಇನ್ಮುಂದೆ ಅಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ ಎಂದು ಮುಖ್ಯಮಂತ್ರಿ ಭಗವಂತ್ ಮಾನ್ ಹೇಳಿದರು.