ಮನೆ ಬಾಗಿಲಿಗೆ ಪಡಿತರ ತಲುಪಿಸಲು ಯೋಜನೆ ರೂಪಿಸಿ

ಕಲಬುರಗಿ:ಎ.28: ಕೊರೊನಾ ಎರಡನೇ ಅಲೆಯ ಮಹಾನ್ ದುರಂತ ರಾಜ್ಯದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಈ ಸಂದರ್ಭದಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುವ ಪಡಿತರಗಳನ್ನು ಅವರವರ ಮನೆ ಬಾಗಿಲೆಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆ (ಕನ್ನಡಿಗರ ಬಣ) ದ ಜಿಲ್ಲಾಧ್ಯಕ್ಷರಾದ ಆನಂದ ತೆಗನೂರ ಸರಕಾರವನ್ನು ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮತನಾಡಿದ ಅವರು, ಪ್ರಧಾನಮಂತ್ರಿಗಳ ಗರೀಭ ಕಲ್ಯಾಣ ಅನ್ನ ಯೋಜನೆಯಲ್ಲಿ ಮೇ 10 ರಿಂದ ಉಚಿತ 10 ಕೆಜಿ ಅಕ್ಕಿ ಹಂಚಿಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ನ್ಯಾಯಬೆಲೆ ಅಂಗಡಿಗಳ ಮುಂದೆ ನೂರಾರು ಸಂಖ್ಯೆಯಲ್ಲಿ ಜನ ಜಾತ್ರೆ ಸೇರುವ ಸಾಧ್ಯತೆ ಇದೆ ಇದರಿಂದಾಗಿ ಪ್ರತಿಯೊಂದು ನ್ಯಾಯಬೆಲೆ ಅಂಗಡಿಗಳು ಸಹ ಕೊರೊನಾ ಪಸರಿಸುವ ಕೇಂದ್ರಗಳಾಗಿ ಮಾರ್ಪಾಡುಗುವುದರಲ್ಲಿ ಸಂಶಯವಿಲ್ಲ. ಇದಲ್ಲದೇ ಪಡಿತರ ವಿತರಣೆಯಲ್ಲಿ ಬಯೋಮೆಟ್ರಿಕ್ ಪದ್ದತಿಯನ್ನು ಅಳವಡಿಸಿರುವುದು ರೋಗವನ್ನು ಹರಡಿಸುತ್ತದೆ. ಈಗಾಗಲೇ ರಾಜ್ಯ ಸರ್ಕಾರವು ಬಿಪಿಎಲ್ ಕಾರ್ಡುದಾರ ಹಾಗೂ ಅಂತ್ಯೋದಯ ಕಾರ್ಡ ಹೊಂದಿರುವ ಫಲಾನುಭವಿಗಳಿಗೆ ನೀಡುವ ಪಡಿತರ ವಿತರಣೆಯಲ್ಲಿ ಕಡಿತಗೊಳಿಸಿರುವುದು ಸಹ ಜನ ವಿರೋಧಿ ನಡೆ ಎಂದು ಆರೋಪಿಸಿದರು.
ಸರಕಾರವು ಓ ಟಿ ಪಿ ಪದ್ದತಿ ಅಳವಡಿಸಿದರು ಸಹ ಯಾವುದೇ ಕಾರಣಕ್ಕೂ ಸೊಂಕು ಹರಡುವಿಕೆಯನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ದೆಹಲಿ ರಾಜ್ಯದಲ್ಲಿ ‌ಅನುಷ್ಠಾನ ಹಂತದಲ್ಲಿರುವ ಮಾದರಿಯಲ್ಲಿ ಪಡಿತರವನ್ನು ಮನೆ ಮನೆ ಬಾಗಿಲಿಗೆ ತಲುಪಿಸುವ ತುರ್ತು ಅವಶ್ಯಕತೆ ಇದ್ದು ಸರಕಾರವು ಸಮಾರೋಪಾದಿಯಲ್ಲಿ ಯೋಜನೆಯನ್ನು ಕಾರ್ಯಗತಗೊಳಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಅಧ್ಯಕ್ಷರಾದ ಶರಣು ಹೊಸಮನಿ , ಜಿಲ್ಲಾ ಕಾರ್ಯಧ್ಯಕ್ಷರಾದ ರಮೇಶ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷರಾದ ಅಶ್ವಿನ್ ರಂಗದಾಳ , ಮಹಿಳಾ ಘಟಕ ಗೌರವಧ್ಯಕ್ಷರಾದ ಸುರೇಖಾ ತಳವಾರ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲ್ಲಿಕಾರ್ಜುನ ಎಸ್ ಭಾವಿ , ರವಿ ಬೆಲ್ಲದ ಸೇರಿದಂತೆ ಇನ್ನಿತರರು ಇದ್ದರು