ಮನೆ ಬಾಗಿಲಿಗೆ ಆರೋಗ್ಯ ಸೇವೆ: ಡಾ.ಬಿ.ವಿ.ಗಿರೀಶ್

ಚಿತ್ರದುರ್ಗ,ಮಾ.31; ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸಲು ನುರಿತ ವೈದ್ಯರ ತಂಡ ಆಗಮಿಸಿದ್ದು, ತಜ್ಞ ವೈದ್ಯರ ಬಳಿ ಎಲ್ಲರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಬಿ.ವಿ.ಗಿರೀಶ್ ಹೇಳಿದರು.
 ನಗರದ ಕೊಳಚೆ ಪ್ರದೇಶ ಸಾದತ್ ನಗರದ ಅಂಗನವಾಡಿ ಕೇಂದ್ರದ ಮುಂಭಾಗದಲ್ಲಿ  ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ನಗರ ಆರೋಗ್ಯ ಕೇಂದ್ರ ಹಾಗೂ ವಿಮುಕ್ತಿ ಮತ್ತು ಸ್ಫೂರ್ತಿ ವಿದ್ಯಾ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
 ಪ್ರತಿಯೊಬ್ಬರು ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಯೋಗಶಾಲ ತಂತ್ರಜ್ಞರ ಬಳಿ ಸಾಂಕ್ರಾಮಿಕ ರೋಗವಾದ ಕೋವಿಡ್-19ಗೆ ಸಂಬಂಧಿಸಿದ ಗಂಟಲು ದ್ರವ, ಸಿಹಿಮೂತ್ರ ಕಾಯಿಲೆಗೆ ಮೂತ್ರ ಮತ್ತು ರಕ್ತ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
 ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ, ಕೋವಿಡ್-19 ಲಸಿಕೆ ಸುರಕ್ಷಿತವಾಗಿದೆ. ಯಾವುದೇ ವದಂತಿಗಳಿಗೆ ಕಿವಿ ಕೊಡದೇ ಲಸಿಕೆ ಪಡೆದುಕೊಳ್ಳಬೇಕು. ಲಸಿಕೆ ಬಗ್ಗೆ ಯಾವುದೇ ಭಯ, ಆತಂಕ ಬೇಡ. ಕೆಮ್ಮು, ಜ್ವರ, ನೆಗಡಿ ಲಕ್ಷಣವಿರುವವರು ತಪ್ಪದೇ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಸ್ತ್ರೀ ರೋಗ ತಜ್ಞೆ ಡಾ.ನಿಶ್ಚಲ, ಜಿಲ್ಲಾ ಆಸ್ಪತ್ರೆ ಶಸ್ತ್ರ ಚಿಕಿತ್ಸಕ ಡಾ.ಅಭಿಲಾಷ್, ವೈದ್ಯರಾದ ಡಾ.ಮಹೇಂದ್ರ, ಡಾ.ಮಂಜುಳಾ, ಆರೋಗ್ಯ ಸಹಾಯಕರಾದ ಭಾಗೇಶ್, ರಂಗಾರೆಡ್ಡಿ, ಬಿ.ಬಿ.ಜಾನ್, ನರೇನಹಳ್ಳಿ ಅರುಣ್‍ಕುಮಾರ್ ಸೇರಿದಂತೆ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಉಪಸ್ಥಿತರಿದ್ದರು.