ಮನೆ ನಿರ್ಮಾಣಕ್ಕಾಗಿ ಸರ್ಕಾರಿ ಭೂಮಿ ಒತ್ತುವರಿ:ಆರೋಪ

ಪಾವಗಡ, ಜು. ೨೭- ಜನಪ್ರತಿನಿಧಿಯೊಬ್ಬರು ತಾಲ್ಲೂಕಿನ ಗುಜ್ಜನಡು ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಕೋಣನಕುರಿಕೆ ಗ್ರಾಮದಲ್ಲಿ ಸರ್ಕಾರಿ ಭೂಮಿ ಒತ್ತುವರಿ ಮಾಡಿಕೊಂಡು ಅದರಲ್ಲಿದ್ದ ಹುಣಸೆಮರ ಕತ್ತರಿಸಿ ಮನೆ ನಿರ್ಮಿಸುತ್ತಿರುವ ಕುರಿತು ಸಾರ್ವಜನಿಕರು ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಮುಖ್ಯ ರಸ್ತೆಗೆ ಹೊಂದಿಕೊಂಡಂತೆ ಪಕ್ಕದಲ್ಲೇ ಇದ್ದ ಗ್ರಾಮಠಾಣಾ ಮತ್ತು ಅದರಲ್ಲಿ ಬೆಳೆದಿದ್ದ ದೊಡ್ಡ ಹುಣಸೆ ಮರವನ್ನು ಯಾರ ಅನುಮತಿ ಪಡೆಯದೆ ಮರ ಕತ್ತರಿಸಿ ಮನೆ ನಿರ್ಮಾಣಕ್ಕೆ ಮುಂದಾಗಿರುವ ಜನಪ್ರತಿನಿಧಿ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದರೆ ಗ್ರಾಮ ಪಂಚಾಯ್ತಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.
ಪ್ರತಿ ವರ್ಷ ಗ್ರಾಮಠಾಣದಲ್ಲಿದ್ದ ಹುಣಸೆ ಮರವನ್ನು ಹರಾಜು ಮಾಡಲಾಗುತ್ತಿತ್ತು. ಇದರಿಂದ ಸರ್ಕಾರಕ್ಕೆ ಆದಾಯ ಬರುತ್ತಿತ್ತು. ಆದರೆ ಗ್ರಾ.ಪಂ. ಚುನಾವಣೆಯ ನಂತರ ಜಾಗ ಮತ್ತು ಜಾಗದಲ್ಲಿದ್ದ ಮರ ಜನಪ್ರತಿನಿಧಿಯ ಪಾಲಾಗಿದೆ ಎಂಬುದು ಮನೆ ನಿರ್ಮಾಣಕ್ಕೂ ಗ್ರಾ.ಪಂ.ನಿಂದ ಅನುದಾನ ಬಳಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
ಗ್ರಾಮ ಪಂಚಾಯ್ತಿ ಹಾಗೂ ತಾಲ್ಲೂಕು ಪಂಚಾಯ್ತಿ ಅಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಲಾಗಿದ್ದು, ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಪರಿಶೀಲಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.