ಮನೆ, ದೇವಸ್ಥಾನದಲ್ಲಿ ಕಳವು: ದಂಪತಿ ಸೆರೆ


ಕುಂದಾಪುರ, ನ.೧೭- ಅಂತರ್ ಜಿಲ್ಲಾ ಮನೆ, ದೇವಸ್ಥಾನಗಳಲ್ಲಿನ ಕಳವು ಪ್ರಕರಣಗಳ ಆರೋಪಿ ದಂಪತಿಯನ್ನು ಕುಂದಾಪುರ ಪೊಲೀಸರು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೂಲತ: ಇಂದ್ರಾಳಿ ದುರ್ಗಾ ನಗರದ ಪ್ರಸ್ತುತ ಧಾರವಾಡ ಜಿಲ್ಲೆಯ ಜನತ್ ನಗರದ ರಾಜೇಶ ನಾಯ್ಕ ಯಾನೆ ರಾಜ ಯಾನೆ ರಾಜು ಪಾಮಡಿ (೪೨) ಹಾಗೂ ಆತನ ಪತ್ನಿ ಪದ್ಮ ಪಾಮಡಿ (೩೭) ಬಂಧಿತ ಆರೋಪಿಗಳು. ಇವರಿಂದ ಕುಂದಾಪುರ, ಉಡುಪಿ ನಗರ, ಮಣಿಪಾಲ, ಗಂಗೊಳ್ಳಿ, ಧಾರ ವಾಡ ನಗರ ಠಾಣಾ ವ್ಯಾಪ್ತಿಯಲ್ಲಿ ಕಳವು ಮಾಡಿರುವ ಒಟ್ಟು ೨೦೨ ಗ್ರಾಂ ತೂಕದ ಚಿನ್ನ ಹಾಗೂ ಒಟ್ಟು ೧.೬೮೩ಕೆ.ಜಿ. ಬೆಳ್ಳಿ, ಎರಡು ದ್ವಿಚಕ್ರ ವಾಹನ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕುಂದಾಪುರ ಬೀಜಾಡಿ ಗ್ರಾಮದ ಬೀಪಾನ್‌ಬೆಟ್ಟು ರಸ್ತೆಯಲ್ಲಿರುವ ಜಯ ರಾಜ್ ಶೆಟ್ಟಿ ಎಂಬವರು ಮನೆಗೆ ಬೀಗ ಹಾಕಿ ಪತ್ನಿ ಮನೆಗೆ ಹೋಗಿದ್ದಾಗ ಜು.೬ರಂದು ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು, ೯,೮೮,೫೦೦ರೂ. ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಕಳವು ಮಾಡಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಮ ದಾಖಲಾಗಿತ್ತು. ಉಡುಪಿ ಎಸ್ಪಿ ವಿಷ್ಣುವರ್ಧನ್ ಆದೇಶದಂತೆ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ಹಾಗೂ ಎಎಸ್ಪಿ ಹರಿರಾಂ ಶಂಕರ್ ಮಾರ್ಗದರ್ಶನದಲ್ಲಿ ಕುಂದಾಪುರ ವೃತ್ತ ನಿರೀಕ್ಷಕ ಗೋಪಿಕೃಷ್ಣ ಕೆ.ಆರ್. ಆರೋಪಿಗಳನ್ನು ಬಂಧಿಸಿ, ಅವರ ವಶದಲ್ಲಿದ್ದ ಹಾಗೂ ಧಾರಾವಾಡದ ಜುವೆಲ್ಲರಿ ಅಂಗಡಿ ಗಳಲ್ಲಿ ಮಾರಾಟ ಮಾಡಿದ್ದ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಗಳನ್ನು ಕುಂದಾಪುರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ರಾಜೇಶ್ ಉಡುಪಿ ಇಂದ್ರಾಳಿಯ ನಿವಾಸಿಯಾಗಿದ್ದರೆ, ಈತನ ಪತ್ನಿ ಧಾರ ವಾಡದಳಾಗಿದ್ದಾಳೆ. ಈ ಹಿಂದೆ ಕಾಪು ಮತ್ತು ಮಣಿಪಾಲ ಠಾಣಾ ವ್ಯಾಪ್ತಿಯಲ್ಲಿ ಕಳ್ಳತನ ನಡೆಸಿ ಜೈಲಿನಲ್ಲಿದ್ದ ರಾಜೇಶ್, ಕಳೆದ ೨೦೨೦ರ ಜುಲೈ ತಿಂಗಳಲ್ಲಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದನು. ಅದರ ನಂತರ ಆತ ಪತ್ನಿ ಜೊತೆ ಸೇರಿಕೊಂಡು ಕುಂದಾಪುರ, ಸುರತ್ಕಲ್, ಮುಲ್ಕಿ, ಮಣಿಪಾಲ, ಗಂಗೊಳ್ಳಿ, ಭಟ್ಕಳ, ಮುರ್ಡೇಶ್ವರ, ಗೋಕರ್ಣ, ಕುಮಟಾ, ಹೊನ್ನಾವರ ಕಾರಾವಾರದಲ್ಲಿ ಮನೆ, ದೇವಸ್ಥಾನ ಮತ್ತು ದೈವಸ್ಥಾನ ಗಳಲ್ಲಿ ಕಳವು ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿ ರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಕಾರ್ಯಚರಣೆಯಲ್ಲಿ ಕುಂದಾಪುರ ಎಸ್ಸೈ ಸದಾಶಿವ ಗವರೋಜಿ, ಕುಂದಾಪುರ ಸಂಚಾರ ಠಾಣಾ ಎಸ್ಸೈ ಸುದರ್ಶನ್, ಶಂಕರನಾರಾಯಣ ಎಸ್ಸೈ ಶ್ರೀಧರ ನಾಯ್ಕ ಹಾಗೂ ಸಿಬ್ಬಂದಿಯವರಾದ ಮಂಜುನಾಥ, ಸಂತೋಷ, ರಾಘವೇಂದ್ರ, ಸಿದ್ದಪ್ಪ, ವೃತ್ತ ಕಚೇರಿಯ ಸಿಬ್ಬಂದಿಯವರಾದ ಸೀತಾರಾಮ, ವಿಕ್ಟರ್, ಗುರುರಾಜ್, ಉದಯ, ಮಹಿಳಾ ಸಿಬ್ಬಂದಿ ಬೇಬಿ, ಚಂದ್ರಾವತಿ, ಅಶ್ರೀತಾ ಮತ್ತು ಚಾಲಕ ಸಂತೋಷ ಪಾಲ್ಗೊಂಡಿದ್ದಾರೆ.