ಮನೆ ಕಳ್ಳತನ: ಇಬ್ಬರು ಆರೋಪಿಗಳ ಬಂಧನ, 50 ಗ್ರಾಂ.ಚಿನ್ನಾಭರಣ ವಶ

ಚಿಂಚೋಳಿ,ಜು.14-ತಾಲ್ಲೂಕಿನ ಚಂದಾಪೂರ ಮತ್ತು ಚಿಮ್ಮಾ ಇದ್ಲಾಯಿ ಗ್ರಾಮಗಳಲ್ಲಿ ನಡೆದ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಚಿಂಚೋಳಿ ಪೊಲೀಸರು 3 ಲಕ್ಷ ರೂ.ಮೌಲ್ಯದ 50 ಗ್ರಾಂ.ಚಿನ್ನಾಭರಣ ವಶ ಪಡಿಸಿಕೊಂಡಿದ್ದಾರೆ.
ಉಮೇಶ ತಂದೆ ಮಲ್ಲಪ್ಪ ಗೌನಳ್ಳಿ ಮತ್ತು ಜಗನ್ನಾಥ ತಂದೆ ತುಳಜಪ್ಪ ಮೇತ್ರಿ ಬಂಧಿತ ಆರೋಪಿಗಳಾಗಿದ್ದಾರೆ.
ಕಳ್ಳರು ಮನೆ ಬೀಗ ಮುರಿದು ಬಂಗಾರ ಮತ್ತು ನಗದು ಹಣ ದೋಚಿಕೊಂಡು ಹೋಗಿದ್ದಾರೆ ಎಂದು ಚಂದಾಪೂರ ಗ್ರಾಮದ ಈಶ್ವರಿ ಗಂಡ ಪ್ರಭು ಹಾಗೂ ಚಿಮ್ಮಾ ಇದ್ಲಾಯಿ ಗ್ರಾಮದ ಉಮಾಕಾಂತ ತಂದೆ ವೀರಭದ್ರಪ್ಪ ಅವರು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ಸಲ್ಲಿಸಿದ್ದರು.
ಈ ದೂರಿನ ಅನ್ವಯ ಎಸ್.ಪಿ.ಇಶಾ ಪಂತ್, ಹೆಚ್ಚುವರಿ ಎಸ್.ಪಿ.ಎನ್.ಶ್ರೀನಿಧಿ, ಚಿಂಚೋಳಿ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕ ಕೆ.ಬಸವರಾಜ ಅವರ ಮಾರ್ಗದರ್ಶನದಲ್ಲಿ ಚಿಂಚೋಳಿ ಸಿಪಿಐ ಅಂಬಾರಾಯ ಎಮ್.ಕಟ್ಟಿಮನಿ ಅವರ ನೇತೃತ್ವದಲ್ಲಿ ಪಿಎಸ್‍ಐ ಮಂಜುನಾಥ ರೆಡ್ಡಿ, ಮಿರಿಯಾಣ ಠಾಣೆಯ ಸಿಬ್ಬಂದಿಗಳಾದ ಬೀರಪ್ಪ, ಶಫಿಯೋದ್ದೀನ್, ಚಿಂಚೋಳಿ ಠಾಣೆಯ ಸಿಬ್ಬಂದಿಗಳಾದ ಬಾಲಕೃಷ್ಣ ರೆಡ್ಡಿ, ರಮೇಶ, ನಾಗರಾಜ, ಮರಿಲಿಂಗಪ್ಪ ಅವರನ್ನೊಳಗೊಂಡ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿ 3 ಲಕ್ಷ ರೂ.ಮೌಲ್ಯದ 50 ಗ್ರಾಂ.ಬಂಗಾರದ ಆಭರಣ ಜಪ್ತಿ ಮಾಡುವಲ್ಲಿ ಯಶಸ್ವಿಯಾಗಿದೆ.