ಮನೆ ಕಳೆದುಕೊಂಡವರಿಗೆ ಹಣ ಬಿಡುಗಡೆ : ಸಚಿವ ವಿ.ಸೋಮಣ್ಣ

ಮೈಸೂರು, ನ.13: ಕಳೆದ ಬಾರಿ ಮನೆ ಕಳೆದುಕೊಂಡರಿಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡಲಾಗಿದೆ ಎಂದು ವಸತಿ ಸಚಿವ ವಿ.ಸೋಮಣ್ಣ ಮಾಹಿತಿ ನೀಡಿದರು.
ಇಂದು ಮೈಸೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ವಸತಿ ಇಲಾಖೆ ಸಾಧನೆಗಳ ಬಗ್ಗೆ ಮೈಸೂರು ಜನಪ್ರತಿನಿಧಿಗಳ ಜೊತೆ ಸೇರಿ ಸುದ್ದಿಗೋಷ್ಠಿ ನಡೆಸಿದರು. ಮೈಸೂರಿನ ಇಲವಾಲ ಬಳಿಯ 496 ಎಕರೆ ಸಾಕಷ್ಟು ಗೊಂದಲಮಯವಾಗಿತ್ತು. ಸೈಟ್ ನಿರ್ಮಾಣ ಮಾಡಿದ ಬಳಿಕ ಜನರಿಗೆ ಅದು ಸಿಕ್ಕಿರಲಿಲ್ಲ. ಸಾಕಷ್ಟು ಮಂದಿ ಇದರಿಂದ ಬೇಸರ ವ್ಯಕ್ತಪಡಿಸಿ ನನ್ನನ್ನು ಭೇಟಿ ಮಾಡಿದ್ದರು. ಆ ವೇಳೆ ಜಾಗ ಕೊಟ್ಟವರಿಗೆ ನಾನು ಸಾಂತ್ವನದ ಮಾತನ್ನು ಹೇಳಿದ್ದೆ. ಬಳಿಕ ಜಾಗ ಕೊಟ್ಟವರಿಗೆ ಸಾಂತ್ವನ ನಿವೇಶನ ಕೊಡಬೇಕು ಎಂದು ಚರ್ಚೆ ಆಗಿತ್ತು. ಇದಕ್ಕೆ ಜಿ.ಟಿ ದೇವೇಗೌಡರ ಸಹಕಾರ ಹೆಚ್ಚಾಗಿದೆ. ಇದೀಗ ನಿವೇಶನ ಕೊಟ್ಟವರಿಗೆ ಸಾಂತ್ವನ ನಿವೇಶನ ಕೊಡುತ್ತಿದ್ದೇವೆ ಎಂದರು.
ಕಳೆದ ಬಾರಿ ಮನೆ ಕಳೆದುಕೊಂಡರಿಗೆ ಮನೆ ಕಟ್ಟಲು ಹಣ ಬಿಡುಗಡೆ ಮಾಡಲಾಗಿದೆ. ಕಳೆದ ಬಾರಿ 65 ಸಾವಿರ ಮನೆಗಳು ಬಿದ್ದುಹೋಗಿದ್ದವು. ಅದಕ್ಕಾಗಿ 1710 ಕೋಟಿ ಹಣ ಬಿಡುಗಡೆ ಆಗಿದೆ. ಮೊದಲ ಕಂತು 1 ಲಕ್ಷವನ್ನು ಎಲ್ಲರಿಗೂ ನೀಡಿದ್ದೇವೆ. ಆದರೆ ಎರಡನೇ ಕಂತಿನ ಹಣವನ್ನು 6-7 ಸಾವಿರ ಮನೆ ಮಾಲೀಕರು ಮಾತ್ರ ತೆಗೆದುಕೊಂಡಿದ್ದಾರೆ. ವಸತಿ ಇಲಾಖೆಯಲ್ಲಿ ಹಣದ ಕೊರತೆ ಇಲ್ಲ. ಶಾಶ್ವತ ಸ್ಥಳಾಂತರಕ್ಕೆ ಕೆಲವರು ಒಪ್ಪುತ್ತಿಲ್ಲ. ಮನೆ ನಿರ್ಮಾಣ ಆಗಿದ್ದರೂ ಜನರು ಹೋಗಿಲ್ಲ. ರಾಜ್ಯಾದ್ಯಂತ ಉಪನಗರ ನಿರ್ಮಾಣಕ್ಕೆ ಚಿಂತನೆ ಮಾಡಿದ್ದೇವೆ ಎಂದರು.
ಯತ್ನಾಳ್ ಪಕ್ಷದಲ್ಲೇ ಇದ್ದಾರೆ
ಯತ್ನಾಳ್ ಪಕ್ಷದಲ್ಲೇ ಇದ್ದಾರೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇದೆ ಅದನ್ನು ಸರಿ ಮಾಡಿಕೊಳ್ಳುತ್ತೇವೆ. ಯಡಿಯೂರಪ್ಪ ನಮ್ಮ ಮುಖ್ಯಮಂತ್ರಿ.ಅವರು ಪ್ರಶ್ನಾತೀತ ನಾಯಕ. ಅವರ ಪರವಾಗಿ ನಾನೇನು ಯತ್ನಾಳ್ ಮನೆಗೆ ಹೋಗಿರಲಿಲ್ಲ. ಯತ್ನಾಳ್ ಮನೆಗೆ ಹೋಗಿ ಒಳ್ಳೆ ಊಟ ಮಾಡಿದ್ದೇನೆ. ನನ್ನ ಕಾರ್ಯಕರ್ತರಿಗೂ ಊಟ ಹಾಕಿದರು. ನಾನು ಅವರ ಮನವೊಲಿಸುವ ಕೆಲಸ ಮಾಡಿಲ್ಲ. ಯತ್ನಾಳ್ ಕೂಡ ನಮ್ಮ ಪಕ್ಷದ ಹಿರಿಯ ನಾಯಕನಾಗಿದ್ದಾರೆ. ಪಕ್ಷದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಸ್ಟಷ್ಟಪಡಿಸಿದರು.
ಪತ್ರಕರ್ತ ರವಿ ಬೆಳೆಗೆರೆ ನಿಧನ ಹಿನ್ನೆಲೆ : ಸಚಿವರ ಸಂತಾಪ
ಪತ್ರಕರ್ತ ರವಿ ಬೆಳೆಗೆರೆ ನಿಧನ ಹಿನ್ನೆಲೆಯಲ್ಲಿ ಸಂತಾಪ ಸೂಚಿಸಿದ ಸಚಿವರು ಹಾಯ್ ಬೆಂಗಳೂರು ಪತ್ರಿಕೆಯನ್ನು ಜನರು ಪ್ರತಿವಾರ ಕಾದು ಓದುತ್ತಿದ್ದರು. ಅವರ ನಿಷ್ಠೂರ ನಡೆಯಿಂದಲೇ ಅವರು ಪ್ರಖ್ಯಾತಿ ಗಳಿಸಿದ್ದರು. ಅವರ ಪೆನ್ನಿನ ಇಂಕು ಎಷ್ಟು ಮಹತ್ವದಾಗಿತ್ತು ಅಂತ ಅವರ ಪತ್ರಿಕೆಯಲ್ಲಿ ತಿಳಿಯುತ್ತಿತ್ತು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ. ನಾನು ನನ್ನ ಆತ್ಮಿಯ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ ಎಂದರು.