ಮನೆ ಕನ್ನಡ ಮನ ಕನ್ನಡ’ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ) ಲಕ್ಷ್ಮೇಶ್ವರ, ಜು14: 12 ನೇ ಶತಮಾನದ ಕಲ್ಯಾಣ ಕ್ರಾಂತಿಗೆ ಮೂಲ ಕಾರಣವೇ ಮಹಾ ಶಿವಶರಣ ಹರಳಯ್ಯ ತಯಾರಿಸಿದ ಚೆಮ್ಮಾವುಗೆ. ಇದು ಸಮ ಸಮಾನ ಸಮಾಜ ನಿರ್ಮಾಣದ ಒಂದು ಕ್ರಾಂತಿಗೆ ಮುನ್ನುಡಿ ಬರೆದಂತಿತ್ತು" ಎಂದು ಹಾನಗಲ್ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ವಿ.ಸಾಲಿಮಠ ಅಭಿಪ್ರಾಯಟ್ಟರು. ಅವರು ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕಾ ಘಟಕದ ವತಿಯಿಂದ ಎನ್.ಆರ್ ಸಾತಪುತೆಯವರ ಮಹಾಮನೆಯಲ್ಲಿ ಹಮ್ಮಿಕೊಂಡಮನೆ ಕನ್ನಡ ಮನ ಕನ್ನಡ’ ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟಿಸಿದ ನಿವೃತ್ತ ದೈಹಿಕ ಪರಿವೀಕ್ಷಕರಾದ ಆರ್.ಎನ್. ಪಂಚಭಾವಿ ಮಾತನಾಡಿ “ಇವತ್ತಿನ ಪರಿಸ್ಥಿತಿಯಲ್ಲಿ 12ನೇ ಶತಮಾನದ ಶಿವಶರಣರ ಆದರ್ಶ ಜೀವನ ಅತ್ಯಂತ ಪ್ರಸ್ತುತ ಮತ್ತು ಅನುಕರಿಸಿ ಆಚರಿಸುವಂತದ್ದು” ಎಂದರು.
ಪ್ರಸ್ತಾವಿಕವಾಗಿ ಮಾತನಾಡಿದ ಕ.ಸಾ.ಪ ತಾಲೂಕ ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ “ಕ.ಸಾ.ಪ ಲಕ್ಷ್ಮೇಶ್ವರ ತಾಲೂಕು ಘಟಕ `ಮನೆ ಕನ್ನಡ ಮನ ಕನ್ನಡ’ದಂತಹ ಕಾರ್ಯಕ್ರಮಗಳ ಮೂಲಕ ಮನೆ ಮನೆಯಲ್ಲಿ ಕನ್ನಡದ ದೀಪ ಹಚ್ಚುವ ಕಾರ್ಯಕ್ರಮಗಳನ್ನು ಸಂಘಟಿಸುತ್ತಿದೆ.ಅದಕ್ಕೆ ಸಮುದಾಯದಿಂದ ಅತ್ಯಂತ ಉತ್ತಮವಾಗಿರುವ ಪ್ರತಿಕ್ರಿಯೆ ಸಿಗುತ್ತಿದೆ” ಎಂದರು.
ಕಾರ್ಯಕ್ರಮದ ಇನ್ನೋರ್ವ ಉದ್ಘಾಟಕ,ಹಿರಿಯ ಸಾಹಿತಿ ಪೂರ್ಣಾಜಿ ಖರಾಟೆ ಮಾತನಾಡಿ “ಇಂತಹ ಕಾರ್ಯಕ್ರಮಗಳನ್ನು ಹೆಚ್ಚೆಚ್ಚು ಸಂಘಟಿಸುವುದರ ಮೂಲಕ ಸಮಾಜದಲ್ಲಿ ಸಮಾನತೆ ಸಾಧಿಸಬಹುದಾಗಿದೆ” ಎಂದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ನಿವೃತ್ತ ಶಿಕ್ಷಣ ಸಂಯೋಜಕರಾದ ಎನ್.ಆರ್.ಸಾತಪುತೆ ತಮ್ಮ ಮಹಾ ಮನೆಗೆ ಆಗಮಿಸಿ ಮಹಾ ಶಿವಶರಣ ಹರಳಯ್ಯನವರ ಜೀವನ ಚರಿತ್ರೆಯನ್ನು ಆಲಿಸಿ, ಆತಿಥ್ಯ ಸ್ವೀಕರಿಸಿದ ಶರಣರಿಗೆ ಧನ್ಯವಾದಗಳನ್ನು ಅರ್ಪಿಸಿದರು.
ತಾಲೂಕಾ ಕದಳಿ ಮಹಿಳಾ ವೇದಿಕೆಯ ಸಹೋದರಿಯರು ವಚನ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು. ಸತೀಶ ಸಾತಪುತೆ ಸ್ವಾಗತಿಸಿದರು. ಇತ್ತೀಚಿಗೆ ನಿವೃತ್ತರಾದ ಶಿಕ್ಷಕರಾದ ವಿ.ಎಂ.ಹೂಗಾರ, ಎಂ.ಜೆ.ಕುರುವಿನಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ವೇದಿಕೆಯಲ್ಲಿದ್ದರು.
ಶಿಕ್ಷಕ ರವಿ ಉಮಚಗಿ, ಸಂತೋಷ ಸಾತಪುತೆ ಸನ್ಮಾನ ಕಾರ್ಯಕ್ರಮ ನಡೆಸಿಕೊಟ್ಟರು. ಕ.ಸಾ.ಪ ಕಾರ್ಯದರ್ಶಿ ಎಂ.ಎಸ್.ಚಾಕಲಬ್ಬಿ ನಿರೂಪಿಸಿದರು. ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ವಂದಿಸಿದರು.